ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ರಾಜಕೀಯದಲ್ಲಿ ನಿರಂತರ ಸೋಲಬೇಕು ಅಥವಾ ಸಾಯಬೇಕು. ಅಲ್ಲಿಯ ಅಧಿಕಾರದ ರುಚಿ ಕಂಡವರು ರಾಜಕೀಯ ಬಿಡುವುದಿಲ್ಲ ಎಂಬ ಮಾತು ಜನಜನಿತ. ಬದುಕಿನ ಕೊನೆ ಗಳಿಗೆಯ ತನಕವೂ ರಾಜಕೀಯ ಸ್ಥಾನಮಾನಕ್ಕಾಗಿ ಹಪಹಪಿಸುವ ಕಾಲದಲ್ಲಿ ಗೌರವಯುತ ರಾಜಕೀಯ ನಿವೃತ್ತಿ ಘೋಷಿಸಿರುವ ಕುಂದಾಪುರ ಈ ಇಬ್ಬರು ನಾಯಕರು ರಾಜ್ಯ ರಾಜಕೀಯ ವಲಯಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.
ವಿಧಾನಸಭಾ ಚುನಾವಣೆ ರಂಗೇರುತ್ತಿರುವ ಈ ಹೊತ್ತಿನಲ್ಲಿ ಮತ್ತೆ ಶಾಸಕರಾಗುವ ಎಲ್ಲಾ ಅವಕಾಶಗಳಿದ್ದರೂ ಚುನಾವಣೆ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಹಾಗೂ ಕಳೆದ ವರ್ಷ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ್ತೆ ಸ್ವರ್ಧಿಸುವ ಅವಕಾಶವಿದ್ದರೂ ಸ್ವರ್ಧಿಸದೇ ಉಳಿದ ಕೆ. ಪ್ರತಾಪಚಂದ್ರ ಶೆಟ್ಟಿ ಅವರದ್ದು ಮಾದರಿ ನಡೆಯೇ ಸರಿ. /ಕುಂದಾಪ್ರ ಡಾಟ್ ಕಾಂ ವರದಿ/
ಕೆ. ಪ್ರತಾಪಚಂದ್ರ ಶೆಟ್ಟಿ ಅವರು 1983ರಿಂದ 1999ರ ತನಕ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ನಾಲ್ಕು ಭಾರಿ ವಿಧಾನಸಭೆ ಹಾಗೂ 2004 ರಿಂದ 2022ರ ತನಕ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದರು. 2018ರಲ್ಲಿ ವಿಧಾನ ಪರಿಷತ್ ಸಭಾಪತಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಒಟ್ಟು 36 ವರ್ಷಗಳ ಅವರ ಶಾಸಕತ್ವದ ಅವಧಿಯಲ್ಲಿ ಅವರೆಂದೂ ತಾವು ನಂಬಿದ ಸಿದ್ಧಾಂತಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ಸಚಿವ ಸ್ಥಾನಕ್ಕಾಗಿ ಹಪಹಪಿಸಲೂ ಇಲ್ಲ. ಕೆಪಿಸಿಸಿ ಸದಸ್ಯತ್ವ ಸ್ಥಾನಕ್ಕೂ ಕಳೆದ 2 ತಿಂಗಳ ಹಿಂದಷ್ಟೇ ರಾಜಿನಾಮೆ ನೀಡಿ ಚುನಾವಣಾ ರಾಜಕೀಯದಿಂದ ಸಂಪೂರ್ಣ ಹಿಂದೆ ಸರಿದಿದ್ದು, ಯುವಕರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು 1999ರಲ್ಲಿ ಕಣಕ್ಕಿಳಿದ ಮೊದಲ ಚುನಾವಣೆಯಲ್ಲಿ 1 ಸಾವಿರ ಮತಗಳಿಂದ ಪ್ರತಾಪಚಂದ್ರ ಶೆಟ್ಟಿ ಅವರ ವಿರುದ್ಧ ಗೆಲುವು ಸಾಧಿಸಿದ್ದರು. ಮುಂದೆ ಬೇರೆ ಬೇರೆ ಅಭ್ಯರ್ಥಿಗಳ ವಿರುದ್ಧ ಪ್ರತಿ ಚುನಾವಣೆಯಲ್ಲಿಯೂ ತಮ್ಮ ಗೆಲುವಿನ ಅಂತರವನ್ನೂ ಹೆಚ್ಚಿಸಿಕೊಳ್ಳುತ್ತಲೇ ಹೋಗಿದ್ದರು. 2013ರಲ್ಲಿ ಪಕ್ಷೇತರರಾಗಿ ನಿಂತಾಗಲೂ ಅತ್ಯಧಿಕ ಅಂತರದಿಂದ ಗೆಲುವು ಸಾಧಿಸಿ ತಮ್ಮ ಸಾಮರ್ಥ್ಯವನ್ನು ತೋರ್ಪಡಿಸಿದ ಹೆಗ್ಗಳಿಕೆ ಹಾಲಾಡಿಯವರದ್ದು. ಆದರೆ ಅವರಿಗೂ ಸಚಿವರಾಗುವ ಅವಕಾಶ ದೊರೆಯಲೇ ಇಲ್ಲ. ಹಾಗಂತ ಅವರೂ ಅದಕ್ಕಾಗಿ ಲಾಭಿ ಮಾಡಲೂ ಇಲ್ಲ. ರಾಜ್ಯ ನಾಯಕರು ತಮ್ಮ ಮನೆಗೆ ಧಾವಿಸಿ ಬಂದಾಗ, ಪಕ್ಷೇತರರಾಗಿ ಸ್ಪರ್ಧಿಸಿ ಮರಳಿ ಮಾತೃ ಪಕ್ಷಕ್ಕೆ ತೆರಳಿದಾಗ ಯಾವುದೇ ಬೇಡಿಕೆಯನ್ನೂ ಇರಿಸಲಿಲ್ಲ. 24 ವರ್ಷಗಳ ಕಾಲ ಶಾಸಕರಾಗಿದ್ದ ಹಾಲಾಡಿ ಅವರಿಗೆ ಸಚಿವ ಸ್ಥಾನ ದೊರೆಯಲಿದ್ದರೂ, ಜನರ ಮನಸ್ಸಿನಲ್ಲಿ ದೊಡ್ಡ ಸ್ಥಾನವನ್ನೇ ಪಡೆದುಕೊಂಡರು. ಸದ್ಯ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ಘೋಷಿಸಿರುವ ಅವರು ಪಕ್ಷಕ್ಕಾಗಿ ದುಡಿಯುವುದಾಗಿ ಹೇಳಿದ್ದಾರೆ. /ಕುಂದಾಪ್ರ ಡಾಟ್ ಕಾಂ ವರದಿ/
ಬೈಂದೂರಿನ ಮಾಜಿ ಶಾಸಕರು ರಾಜಕೀಯ ನಿವೃತ್ತಿ ಘೋಷಿಸಿದ್ದರು:
ಹಿಂದೆ ಬದಲಾದ ಸನ್ನಿವೇಶದಲ್ಲಿ ಮೂರನೇ ಹಣಕಾಸು ಆಯೋಗದ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾಗಿದ್ದ ದಿ. ಎ.ಜಿ. ಕೊಡ್ಗಿ ಅವರು ತಮ್ಮ 85ನೇ ವಯಸ್ಸಿಗೆ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದರು. ಬೈಂದೂರು ಮಾಜಿ ಶಾಸಕರಾಗಿ ಕೆ. ಲಕ್ಷ್ಮೀ ನಾರಾಯಣ ಅವರು 77ನೇ ವರ್ಷಕ್ಕೆ ರಾಜಕೀಯ ನಿವೃತ್ತಿ ಘೋಷಿಸಿದ್ದರು. ಆ ಬಳಿಕ ಈ ಇಬ್ಬರು ನಾಯಕರು ಸಾಮಾಜಿಕವಾಗಿ ಸಕ್ರೀಯವಾಗಿದ್ದರೂ ಮತ್ತೆ ರಾಜಕೀಯದತ್ತ ತಲೆ ಹಾಕಿರಲಿಲ್ಲ. ಎ.ಜಿ ಕೊಡ್ಗಿ ಅವರು ತಮ್ಮ 93ನೇ ವಯಸ್ಸಿನಲ್ಲಿ ನಿಧನರಾದರು. ಇನ್ನು ಬೈಂದೂರು ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಅವರು ಕೂಡ ಸಾಮಾಜಿಕ, ಧಾರ್ಮಿಕವಾಗಿ ಸಕ್ರಿಯವಾಗಿದ್ದರೂ ರಾಜಕೀಯದಿಂದ ದೂರ ಉಳಿದಿದ್ದಾರೆ.
ಒಟ್ಟಿನಲ್ಲಿ ಸಾಯುವ ತನಕವೂ ರಾಜಕೀಯ ಮಾಡುವವರ ನಡುವೆ ಕುಂದಾಪುರದ ಈ ನಾಯಕರುಗಳ ಪ್ರೌಢ ನಿರ್ಧಾರವು ಹೊಸಬರಿಗೆ ರಾಜಕೀಯದಲ್ಲಿ ಮುಂದುವರಿಯಲು ದಾರಿ ಮಾಡಿಕೊಟ್ಟಿದ್ದಲ್ಲದೇ, ರಾಜಕೀಯದಲ್ಲಿ ಗೌರವಯುತ ನಿರ್ಗಮನ ಬೇಕು ಎಂಬ ಸಂದೇಶ ರಾಜ್ಯಕ್ಕೆ ಸಾರುವಂತಾಯಿತು. /ಕುಂದಾಪ್ರ ಡಾಟ್ ಕಾಂ ವರದಿ/