ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯ ಸಾರ್ವತ್ರಿಕ ಚುನಾವಣೆ ಭಾಗವಾಗಿ ಉಡುಪಿ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆಯಿತು. ವಯಸ್ಕರ ಆಸಕ್ತಿ, ಯುವ ಜನಾಂಗದ ಉತ್ಸಾಹದ ನಡುವೆ ಜಿಲ್ಲೆಯಲ್ಲಿ ಶೇ.78.39 ಮತದಾನ ನಡೆದಿದೆ.
ಕುಂದಾಪುರ ವಿಧಾನಸಭಾ ಕ್ಷೇತ್ರ ಹಾಗೂ ಬೈಂದೂರು ವಿಧಾನಸಬಾ ಕ್ಷೇತ್ರದಲ್ಲಿ ಒಂದೆರಡು ಕಡೆಗಳಲ್ಲಿ ಮತಯಂತ್ರದ ಸಮಸ್ಯೆಯಿಂದ ಮತದಾನ ಪ್ರಕ್ರಿಯೆ ಕೊಂಚ ವಿಳಂಬವಾಗಿರುವುದು ಹೊರತುಪಡಿಸಿ ಎಲ್ಲೆಡೆಯೂ ಸಾಂಗವಾಗಿ ಮತದಾನ ನಡೆಯಿತು. ಸಖಿ ಮತಗಟ್ಟೆ, ಯಕ್ಷಗಾನ ಮತಗಟ್ಟೆ, ಚಿನ್ನರ ಅಂಗಣ ಸೇರಿದಂತೆ ಚುನಾವಣೆ ಹಾಗೂ ಚುನಾವಣಾ ಪೂರ್ವದಲ್ಲಿ ಮತದಾನ ಕೇಂದ್ರದಲ್ಲಿ ಮಾಡಲಾದ ವಿವಿಧ ಪ್ರಯೋಗ ಮತದಾರರನ್ನು ಆಕರ್ಪಿಸಿದವು.
ಕೋಟೇಶ್ವರ ಸರಕಾರಿ ಪ.ಪೂ. ಕಾಲೇಜು ಯಕ್ಷಗಾನ ಮತಗಟ್ಟೆ ನಾವುಂದ ಸಖಿ ಮತಗಟ್ಟೆಯಲ್ಲಿ ಮೊದಲ ಭಾರಿ ಮತದಾನ ಮಾಡಿದ ಖುಷಿಯಲ್ಲಿ ಯುವತಿಯರು ತಗ್ಗರ್ಸೆಯಲ್ಲಿ 108 ವರ್ಷದ ವೃದ್ಧೆ ಮತದಾನದಲ್ಲಿ ಪಾಲ್ಗೊಂಡಿರುವುದು ಅಮಾಸೆಬೈಲುವಿನಲ್ಲಿ ಹಿರಿಯರೊಂದಿಗೆ ಯುವ ಸಮುದಾಯ ಮತದಾನದಲ್ಲಿ ಪಾಲ್ಗೊಂಡಿರುವುದು
ಪೋಲಿಂಗ್ ಬೂತಿಗೆ ತೆರಳು ವಿವಿಧ ರಾಜಕೀಯ ಪಕ್ಷಗಳು ವಯಸ್ಕರಿಗೆ ಹಿರಿಯರಿಗೆ, ದೂರದಿಂದ ಬರುವವರಿಗೆ ವಾಹನ ವ್ಯವಸ್ಥೆ ಮಾಡಿದ್ದವು. 108 ವರ್ಷದ ವೃದ್ಧೆ ಸೇರಿದಂತೆ ಹಲವು ಹಿರಿಯರು ಮನೆಯಲ್ಲಿಯೇ ಮತದಾನದ ಅವಕಾಶವನ್ನು ನಿರಾಕರಿಸಿ ಮತಗಟ್ಟೆಗೆ ತೆರಳಿ ಮತದಾನ ಮಾಡಿರುವುದು ವಿಶೇಷವಾಗಿತ್ತು.
ಕುಂದಾಪುರದಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಲಾಡಿಯಲ್ಲಿ, ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಬಸ್ರೂರಿನಲ್ಲಿ, ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ ಮಚ್ಚಟ್ಟುವಿನಲ್ಲಿ, ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಮೊಳಹಳ್ಳಿ ಅವರು ಮೊಳಹಳ್ಳಿಯಲ್ಲಿ ಮತದಾನ ಮಾಡಿದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ನೆಂಪುವಿನಲ್ಲಿ, ಮಾಜಿ ಶಾಸಕ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಕನ್ಯಾನದಲ್ಲಿ, ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಅವರು ಬೈಂದೂರಿನಲ್ಲಿ, ಬಿಜೆಪಿ ಅಭ್ಯರ್ಥಿ ಗುರುರಾಜ ಶೆಟ್ಟಿ ಗಂಟಿಹೊಳೆ ಕಂಚಿಕಾನು ಮತಗಟ್ಟೆಯಲ್ಲಿ ಹಾಗೂ ನಟ ರಿಷಬ್ ಶೆಟ್ಟಿ ಕೆರಾಡಿಯ ಮತಗಟ್ಟೆಯಲ್ಲಿ ಮತಚಲಾಯಿಸಿದರು.
ಇದನ್ನೂ ಓದಿ: ► ಸಾರ್ವತ್ರಿಕ ಚುನಾವಣೆ -2023: ಉಡುಪಿ ಜಿಲ್ಲೆಯಲ್ಲಿ ಶೇ.78.39 ಮತದಾನ – https://kundapraa.com/?p=66667 .