ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರಾಚೀನ ಕಲೆಗಳಲ್ಲಿ ಒಂದಾದ ಚಿತ್ರಕಲೆ ಮನಸ್ಸನ್ನು ಅರಳಿಸುವ ಕಲಾಪ್ರಕಾರವಾಗಿದೆ. ಬಣ್ಣಗಳ ಹಾಗೂ ರೇಖೆಗಳ ಮೂಲಕ ಸಮಾಜಕ್ಕೆ ಸಂದೇಶ ನೀಡುವ ಕಲೆ ಎಲ್ಲರಿಗೂ ಸಿದ್ಧಿಸಿದೆ ಎಂದು ಮೂಡುಬಿದಿರೆ ಜೈನಮಠದ ಡಾ| ಸಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯಮಹಾಸ್ವಾಮೀಜಿ ಹೇಳಿದರು
ಅವರು ಇಲ್ಲಿನ ಸೂರ್ನಳ್ಳಿ ರಸ್ತೆಯ ಸುಪ್ರಭ ಕಾಂಪ್ಲೆಕ್ಸ್ನಲ್ಲಿ ಶುಕ್ರವಾರ ಮಣಿಪಾಲದ ತ್ರಿವರ್ಣ ಆರ್ಟ್ ಗ್ಯಾಲರಿ ಆ್ಯಂಡ್ ಕ್ಲಾಸಸ್ ಆಯೋಜಿಸಿದ ಸ್ಪಿರಿಚುವಾಲಿಟಿ ದ ಪವರ್ ಆಫ್ ಇನ್ನರ್ ವಿವ್ಯೂ ಎಂಬ ಚಿತ್ರಕಲಾ ಪ್ರದರ್ಶನ, ಆರ್ಟ್ ಗ್ಯಾಲರಿ ಉದ್ಘಾಟಿಸಿ ಆಶೀರ್ವಚನ ನೀಡಿ, ಬಂಧಗಳಿದ್ದರೆ ಸೃಜನಶೀಲತೆ ಸಾಧ್ಯವಿಲ್ಲ, ಬಂಧನ ಇರುವಲ್ಲಿ ಕಲೆ ಅರಳುವುದೂ ಇಲ್ಲ. ಅದು ಸುಪ್ತ ಮುಕ್ತವಾಗಿರಬೇಕು ಎಂದ ಅವರು, ಕಲಾವಿದನಿಗೆ ಪರಿಸರದ ಸಂವೇದನೆಯ ಮನ ಇರಬೇಕು. ಅನೇಕತೆಯಲ್ಲಿ ಏಕತೆ ತರುವ ಗುಣ ಇರಬೇಕು ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಕೋಟೇಶ್ವರ, ಡಿವೈಎಸ್ಪಿ ಕೆ. ಶ್ರೀಕಾಂತ್, ಉದ್ಯಮಿ ಕೆ. ರತ್ನಾಕರ ನಾಯ್ಡ್ ಉಪಸ್ಥಿತರಿದ್ದರು.
ತ್ರಿವರ್ಣ ಆರ್ಟ್ ಗ್ಯಾಲರಿಯ ಸಂಸ್ಥಾಪಕ, ಕಲಾವಿದ ಹರೀಶ್ ಸಾಗಾ ಪ್ರಸ್ತಾವಿಕ ಮಾತುಗಳನ್ನಾಡಿ ಆಧ್ಯಾತ್ಮಿಕದ ವೈಯಕ್ತಿಕ ಅನುಭವಗಳನ್ನು ಕಲಾವಿದರು ಬಣ್ಣದ ರೂಪದಲ್ಲಿ ಚೆಲ್ಲಿದ್ದಾರೆ. ಕುಂದಾಪುರದಲ್ಲಿ ಕಲಾ ಗ್ಯಾಲರಿ ಮಾಡ ಬೇಕೆಂಬ ಬಹಳ ಕಾಲದ ಕನಸು ಇಂದು ನನಸಾಗಿದೆ. ಕುಂದಾಪುರದಲ್ಲಿ ಚಿತ್ರ ಪ್ರದರ್ಶನಕ್ಕೆ ಗ್ಯಾಲರಿ ಸ್ಥಾಪನೆ ಮೂಲಕ ವೇದಿಕೆ ಒದಗಿಸಿದಂತಾಗಿದೆ. ಚಿತ್ರಕಲಾ ತರಬೇತಿಯೂ ನಡೆಯಲಿದೆ ಎಂದರು.
ಕಲಾವಿದ, ವೈದ್ಯ ಡಾ| ದೀಪಕ್ ಮಲ್ಯ ಸ್ವಾಗತಿಸಿ, ಸಂಪ್ರದಾ ರಾವ್ ವಂದಿಸಿದರು. ಕಲಾವಿದೆ ಚೇತನಾ ಗಣೇಶ್ ಕಾರ್ಯಕ್ರಮ ನಿರ್ವಹಿಸಿದರು.