ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಜು.05: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನದಿ ಕೆರೆ ಹಳ್ಳಗಳು ತುಂಬಿ ಹರಿಯುತ್ತಿದೆ. ಈ ನಡುವೆ ಮಂಗಳವಾರ ತಡರಾತ್ರಿ ಮನೆಗೆ ತೆರಳುತ್ತಿದ್ದ ವ್ಯಕ್ತಿಯೋರ್ವ ದ್ವಿಚಕ್ರ ವಾಹನ ಸಹಿತ ಕೆರೆಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಮಲ್ಯಾಡಿ ಎಂಬಲ್ಲಿ ನಡೆದಿದೆ.
ಕೆದೂರು ಗ್ರಾಮದ ಮಲ್ಯಾಡಿ ನಿವಾಸಿ ದಿವಾಕರ್ ಶೆಟ್ಟಿ (53) ಮೃತ ದುರ್ದೈವಿ. ರಾತ್ರಿ ಕೆಲಸ ಮುಗಿಸಿ ತನ್ನ ಮ್ಯಾಸ್ಟ್ರೋ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ, ಮನೆಯ ಸಮೀಪದ ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕೆರೆಗೆ ಬಿದ್ದಿದ್ದಾರೆ. ರಾತ್ರಿ ಸುಮಾರು 11:30ರ ವೇಳೆಗೆ ಘಟನೆ ನಡೆದಿದ್ದು, ಅಂದಾಜು 15 ಅಡಿ ಆಳದ ಕೆರೆಗೆ ತಡೆಗೋಡೆ ಇಲ್ಲದಿರುವುದು ಹಾಗೂ ಕೆರೆ ತುಂಬಿ ರಸ್ತೆಯ ಮೇಲೆ ನೀರು ಹರಿಯುತ್ತಿದ್ದ ಕಾರಣ ದಿವಾಕರ ಶೆಟ್ಟಿ ಅವರು ಆಯತಪ್ಪಿ ತನ್ನ ದ್ವಿಚಕ್ರ ವಾಹನ ಮ್ಯಾಸ್ಟ್ರೋ ಸಹಿತ ಕೆರೆಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಕೋಟ ಮಣೂರು ಸಮೀಪದ ಹೋಟೆಲೊಂದರಲ್ಲಿ ಕ್ಯಾಶಿಯರ್ ಆಗಿರುವ ದಿವಾಕರ್ ಅವರು ಸಮಯಕ್ಕೆ ಸರಿಯಾಗಿ ಮನೆಗೆ ಬಾರದಿರುವುದಿಂದ ಅವರ ಪತ್ನಿ ಅನುಮಾನಗೊಂಡು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಹುಡುಕಾಟ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಕೆರೆಯಲ್ಲಿ ದ್ವಿಚಕ್ರ ವಾಹನದ ಹಿಂಭಾಗ ಕಾಣಿಸಿತ್ತು.
ಸ್ಥಳೀಯರು ಪೊಲೀಸರಿಗೆ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದು ಕೆರೆ ನೀರು ಹೆಚ್ಚಿದ್ದರಿಂದ ಮುಳುಗುತಜ್ಞ ಈಶ್ವರ ಮಲ್ಪೆ ಮತ್ತು ಕೋಟ ಜೀವನ್ ಮಿತ್ರ ನಾಗರಾಜ್ ಪುತ್ರನ್ ಅವರನ್ನೂ ಕರೆಸಿಕೊಳ್ಳಲಾಯಿತು. ಮೊದಲು ಸ್ಕೂಟರ್ ಅನ್ನು ಮೇಲಕ್ಕೆತ್ತಲಾಯಿತು. ಸತತ ಹುಡುಕಾಟದ ಬಳಿಕ ಮೃತದೇಹವನ್ನು ಪತ್ತೆಮಾಡಿ ಮೇಲಕ್ಕೆ ತರಲಾಯಿತು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
► ಯಡಮೊಗೆ: ಕುಬ್ಜಾ ನದಿಗೆ ಬಿದ್ದು ಅರ್ಚಕ ಸಾವು – https://kundapraa.com/?p=67534 .