ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಳೆದ ನಾಲ್ಕೈದು ದಿನಗಳಲ್ಲಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು ಅಪಾರ ಹಾನಿಯೂ ಸಂಭವಿಸುತ್ತಿದೆ. ತಾಲೂಕಿನ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ತಾರಾಪತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಮೇಲ್ಛಾವಣಿ ಗಾಳಿ ಮಳೆಗೆ ನೆಲಸಮವಾಗಿದೆ.
ಗುರುವಾರ ಬೆಳಿಗ್ಗೆ ಸುರಿದ ಭಾರಿ ಗಾಳಿ ಮಳೆಗೆ ತಾರಾಪತಿ ಶಾಲೆಯ ಉತ್ತರ ದಿಕ್ಕಿನ ಕಟ್ಟಡದ ಹೆಂಚಿನ ಮೇಲ್ಛಾವಣಿ ನೆಲಸಮವಾಗಿದೆ. ಗೋಡೆಗಳು ಶಿಥಿಲಗೊಂಡಿದೆ. ಶಾಲೆಗೆ ರಜೆ ಇದ್ದುದರಿಂದ ಯಾವುದೇ ಅವಘಡ ಸಂಭವಿಸಿಲ್ಲ. ಕಟ್ಟಡ ಶಿಥಿಲಾವಸ್ಥೆಯಲ್ಲಿರುವ ಬಗ್ಗೆ ಇಲಾಖೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಜಖಂಗೊಂಡ ಕಟ್ಟಡದಲ್ಲಿ ಒಟ್ಟು ಮೂರು ಕೊಠಡಿಗಳಿದ್ದು, ಅದರಲ್ಲಿ ಎರಡು ಕೊಠಡಿಗಳು ಉದುರಿಬಿದ್ದಿವೆ. ಶಾಲೆಯಲ್ಲಿ 120 ವಿದ್ಯಾರ್ಥಿಗಳು ಅಲ್ಲದೇ ಎಲ್ಕೆಜಿ ಹಾಗೂ ಯುಕೆಜಿ ವಿದ್ಯಾರ್ಥಿಗಳು ಇಲ್ಲಿಯೇ ವ್ಯಾಸಂಗ ಮಾಡುತ್ತಿರುವುದರಿಂದ, ಶಾಲೆಗೆ ತುರ್ತು ಕೊಠಡಿಯ ಅವಶ್ಯಕತೆ ಎದುರಾಗಿದೆ.
ಜಿಲ್ಲಾಡಳಿತ ಹಾಗೂ ಬೈಂದೂರು ಶಾಸಕರು ಈ ಬಗ್ಗೆ ಗಮನ ಹರಿಸಿ ನೂತನ ಕಟ್ಟಡ ಒದಗಿಸಿಕೊಡುವಂತೆ ಶಾಲಾ ಎಸ್‌ಡಿಎಂಸಿ ಮನವಿ ಮಾಡಿಕೊಂಡಿದೆ. ಗ್ರಾಮ ಲೆಕ್ಕಿಗರು ಶಾಲೆಗೆ ಭೇಟಿ ನೀಡಿ ಘಟನೆ ಮಾಹಿತಿ ಪಡೆದುಕೊಂಡಿದ್ದಾರೆ.