ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಿವಮೊಗ್ಗ,ಜು.30: ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತದ ಬಳಿ ನೀರಿಗೆ ಬಿದ್ದು ಮೃತಪಟ್ಟ ಶರತ್ ಮನೆಗೆ ಸಂಸದ ಬಿ.ವೈ. ರಾಘವೇಂದ್ರ ಭೇಟಿ ನೀಡಿ ಪೋಷಕರಿಗೆ ಸಾಂತ್ವಾನ ಹೇಳಿದರು.
ಜು.23ರಂದು ಘಟನೆ ನಡೆದಿದ್ದು, 8 ದಿನಗಳ ಬಳಿಕ ಯುವಕ ಶರತ್ ವೃತದೇಹ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಭದ್ರಾವತಿ ತಾಲೂಕಿನ ಸುಣ್ಣದಹಳ್ಳಿ ಶರತ್ ಮನೆಗೆ ಭೇಟಿನೀಡಿ, ಪೋಷಕರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಅಧಿಕಾರಿಗಳೊಂದಿಗೆ ಮಾತನಾಡಿ ತಕ್ಷಣ ಪರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸುವಂತೆ ತಿಳಿಸಿದರು.
ಇಂದು ಮೃತದೇಹ ಪತ್ತೆ, ಮರಣೋತ್ತರ ಪರೀಕ್ಷೆಗೆ ರವಾನೆ
ಭದ್ರಾವತಿಯಲ್ಲಿ ಸ್ವಂತ ಉದ್ಯಮ ಮಾಡಿಕೊಂಡಿದ್ದ ಶರತ್, ತನ್ನ ಸ್ನೇಹಿತನೊಂದಿಗೆ ಅರಶಿನಗುಂಡಿ ಜಲಪಾತಕ್ಕೆ ತೆರಳಿದ ಸಂದರ್ಭ ಈ ಘಟನೆ ನಡೆದಿದೆ. ನಿರಂತರ ಒಂದು ವಾರದ ಹುಡುಕಾಟ ನಡೆದಿತ್ತಾದರೂ, ಬಿಡದೇ ಸುರಿದ ಮಳೆ ಕಾರ್ಯಾಚರಣೆಗೆ ಅಡ್ಡಿಯುಂಟುಮಾಡಿತ್ತು. ಮೃತದೇಹವನ್ನು ಭಾನುವಾರ ಬೆಳಿಗ್ಗೆ ಇಲಾಖೆಯೊಂದಿಗೆ ಸ್ಥಳೀಯರು ಹುಡುಕಾಟ ನಡೆಸುವಾಗಿ ಪತ್ತೆಹಚ್ಚಿದ್ದು, ನೀರಿಗೆ ತಾಕಿಕೊಂಡಿದ್ದ ಮರದ ದಿಮ್ಮಿಗಳ ನಡುವೆ ಸಿಲುಕಿಕೊಂಡಿತ್ತು. ಮಧ್ಯಾಹ್ನದ ವೇಳೆಗೆ ಈಶ್ವರ ಮಲ್ಪೆ ಹಾಗೂ ತಂಡ ಮೃತದೇಹವನ್ನು ನೀರಿನಿಂದ ಹೊರತೆಗೆದಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿತ್ತು.
ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಕೊಲ್ಲೂರಿನ ಅರಶಿನಗುಂಡಿ ಬಳಿಯ ಜಲಪಾತದಲ್ಲಿ ಮೃತಪಟ್ಟ ಭದ್ರಾವತಿಯ ಸ್ವಾವಲಂಬಿ, ಮಾದರಿ ಯುವಕ ಶರತ್ ಕುಮಾರ್ ಮೃತಪಟ್ಟಿರುವುದು ದುರ್ದೈವದ ಸಂಗತಿಯಾಗಿದೆ. ಮಳೆಗಾಲದಲ್ಲಿ ಜಲಪಾತ, ನೀರಿನ ಝರಿಗಳಿಗೆ ಭೇಟಿ ನೀಡುವಾಗ ಅತ್ಯಂತ ಎಚ್ಚರ ವಹಿಸಿ. ಜಾರುವ ಬಂಡೆ ಕಲ್ಲುಗಳು, ನೆಲ, ಮಣ್ಣು ನಿಮಗೆ ಅಪಾಯ ತಂದೊಡ್ಡಬಲ್ಲವು. ಜೀವ ಇದ್ದರಷ್ಟೇ ಜೀವನ ಎಂಬ ಮಾತು ನಿಮ್ಮ ನೆನಪಿನಲ್ಲಿರಲಿ ಎಂದಿದ್ದಾರೆ.