ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ ಮಳೆ ಕೊರತೆಯಿಂದಾಗಿ ಭತ್ತದ ಬೆಳೆ ಹಾಗೂ ತೋಟಗಾರಿಕಾ ಬೆಳೆಗಳು ಒಣಗುತ್ತಿದೆ. ಹಾಗಾಗಿ ಬೈಂದೂರನ್ನು ಬರಗಾಲ ಪೀಡಿತ ತಾಲೂಕನ್ನಾಗಿ ಘೋಷಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ಮನವಿ ಮಾಡಿದರು.
ಅವರು ಬೈಂದೂರು ಮಿನಿವಿಧಾನಸೌಧ ಶಾಸಕರ ಕಛೇರಿಯಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ಸರಕಾರ ರೈತರಿಗೆ ನೀಡಿದ ಉಚಿತ ವಿದ್ಯುತ್ ಯೋಜನೆಯಂತೆ ಲೋಡ್ ಶೆಡ್ಡಿಂಗ್ ಮಾಡದೇ ವಿದ್ಯುತ್ ಒದಗಿಸಬೇಕು. ವಿದ್ಯುತ್ ಕೊರತೆ ಇದ್ದರೆ, ಬೇರೆ ರಾಜ್ಯದಿಂದಾದರೂ ಖರೀದಿಸಿ ನೀಡಲಿ. ರೈತರಿಗೆ ನೀರು, ವಿದ್ಯುತ್ ದೊರೆತರೆ ಯಾವುದೇ ಭಾಗ್ಯದ ಅವಶ್ಯಕತೆ ಇರುವುದಿಲ್ಲ ಎಂದ ಅವರು, ಉಡುಪಿ ಜಿಲ್ಲೆಯಲ್ಲಿ ಸರಕಾರಿ ಬಸ್ಸುಗಳ ಸಂಖ್ಯೆ ತೀರಾ ಕಡಿಮೆಯಿದ್ದು ಶಕ್ತಿ ಯೋಜನೆಯ ಲಾಭ ಜಿಲ್ಲೆಯ ಮಹಿಳೆಯರಿಗೆ ದೊರೆಯುತ್ತಿಲ್ಲ. ಖಾಸಗಿ ಬಸ್ಸುಗಳಿಗೂ ಸಬ್ಸಿಡಿ ಒದಗಿಸಿದರೆ ಕರಾವಳಿಯ ಹೆಣ್ಣುಮಕ್ಕಳಿಗೆ ಅನುಕೂಲ ಮಾಡಿದಂತಾಗುವುದು ಇಲ್ಲದಿದ್ದರೆ ಕೇವಲ ಪ್ರಚಾರದ ಯೋಜನೆಯಾಗುವುದು. ಮಹಿಳೆಯರಿಗೆ ಒಂದು ಕಡೆ ಹಣವನ್ನು ಕೊಟ್ಟಂತೆ ಮಾಡಿ ಟ್ಯಾಕ್ಸ್ ರೂಪದಲ್ಲಿ ಹಿಂಪಡೆಯುತ್ತಿದ್ದಾರೆ. ಇದು ತೋರಿಕೆಯ ಯೋಜನೆಯಾಗಿದೆ ಎಂದು ಟೀಕಿಸಿದರು.
ಹಿಂದಿನ ಸರಕಾರದ ಅವಧಿಯಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ತರಲಾಗಿದ್ದು, ಕೆಲವು ಕಾಮಗಾರಿಗಳು ಮುಗಿದ್ದರೇ, ಮಹತ್ವದ ಕಾಮಗಾರಿಗಳು ಪ್ರಗತಿಯಲ್ಲಿದೆ. ಆದರೆ ಈಗಿನ ಸರಕಾರದ ಅವಧಿಯಲ್ಲಿ ಕಾಮಗಾರಿಗಳು ಇನ್ನಷ್ಟು ವಿಳಂಬವಾಗುತ್ತಿದೆ. ಅನುದಾನದ ಹೊರತಾಗಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುವುದು ಸರಿಯಲ್ಲ ಎಂದರು.
ಸರಕಾರಿ ಆಸ್ಪತ್ರೆಯಲ್ಲಿ ಆ್ಯಂಬುಲನ್ಸ್ ಸೇವೆ ಸರಿಯಾಗಿ ದೊರೆಯುತ್ತಿಲ್ಲ ಎಂಬ ಬಗ್ಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು ಕೂಡಲೇ ವ್ಯವಸ್ಥೆ ಸರಿಪಡಿಸುವುದು, ಖಾಲಿ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ತುಂಬಿಸಿಸುವುದು ಹಾಗೂ ಜನರಿಕ್ ಮೆಡಿಸಿಕ್ ಮಳಿಗೆ ಆಸ್ಪತ್ರೆ ಆವರಣದಲ್ಲಿಯೇ ತೆರೆಯುವ ಬಗ್ಗೆ ಸೂಚಿಸಸಿದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಮನೆ ಮನೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯ ಪ್ರಗತಿ ಬಗ್ಗೆ ಮಾಹಿತಿ ಪಡೆದ ಸಂಸದರು, ಪೈಪ್ ಲೈನ್ ಅಳವಡಿಕೆ, ದುರಸ್ತಿ, ಓವರ್ ಹೆಡ್ ಟ್ಯಾಂಕ್ ನಿರ್ಮಾಣ, ಪೈಪ್ ಲೈನ್ ಕೊಂಡೊಯ್ಯುವ ಜಾಗದ ಕ್ಲಿಯರೆನ್ಸ್ ಮೊದಲಾದವುಗಳ ಬಗ್ಗೆ ತುರ್ತು ಕ್ರಮ ಕೈಗೊಂಡು ಕಾಮಗಾರಿ ತ್ವರಿತಗೊಳಿಸುವಂತೆ ಸೂಚಿಸಿದರು. ವಿಧಾನಸಭಾ ಕ್ಷೇತ್ರಕ್ಕೆ ಈಗಾಗಲೇ 25 ಟವರ್ ಮಂಜೂರಾಗಿದ್ದು, ಇನ್ನೂ 25 ಟವರ್ ನಿರ್ಮಾಣಕ್ಕೆ ಸಮೀಕ್ಷೆ ನಡೆಸಲಾಗಿದೆ. ಈಗಾಗಲೇ ಮುಂಜೂರಾದ ಟವರ್ ನಿರ್ಮಾಣ ಕಾಮಗಾರಿ ಕೆಲವೆಡೆ ಪ್ರಗತಿಯಲ್ಲಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಭಾಕಿ ಉಳಿದೆಡೆ ಶೀಘ್ರ ಕಾಮಗಾರಿ ಆರಂಭಿಸುವಂತೆ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚುತ್ತಿದ್ದು ಶೀಘ್ರ ಗೋಶಾಲೆ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಪ್ರವಾಸೋದ್ಯಮ ಇಲಾಖೆ ವತಿಯಿಂದ ಸೋಮೇಶ್ವರ ಬೀಚ್ ಹಾಗೂ ಮರವಂತೆ ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಪರಿಶೀಲನೆ, ಗಂಗೊಳ್ಳಿ ಬ್ರೇಕ್ ವಾಟರ್, ಮರವಮತೆ ಹೊರಬಂದರು ಎರಡನೇ ಹಂತದ ಕಾಮಾಗಾರಿ ವಿಳಂಬ ಕಂದಾಯ ಇಲಾಖೆಯಿಂದ ಡೀಮ್ಡ್ ಫಾರೆಸ್ಟ್ ವಿರಹಿತ ಭೂಮಿ ಹಂಚಿಕೆ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆಯ ಪ್ರಗತಿಯ ಬಗ್ಗೆ ಈ ವೇಳೆ ಚಿರ್ಚಿಸಿದರು.
ಸಭೆಯಲ್ಲಿ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ, ಎಂಎಲ್ಸಿ ಭಾರತಿ ಶೆಟ್ಟಿ, ಬೈಂದೂರು ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ, ಇಓ ಭಾರತಿ ಹಾಗೂ ವಿವಿಧ ಇಲಾಖಾ ಅಧಿಕಾರಿಗಳ ಉಪಸ್ಥಿತರಿದ್ದರು.
ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಬಿಜೆಪಿ ಪಕ್ಷವನ್ನು ತೊರೆಯುವ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಬಿ.ವೈ. ರಾಘವೇಂದ್ರ ಅವರು, ಬಿ.ಎಂ. ಸುಕುಮಾರ ಶೆಟ್ಟಿ ಅವರು ಹಿಂದೆ ಬಿಜೆಪಿ ಪಕ್ಷದಲ್ಲಿದ್ದಾಗ ಅವರನ್ನು ಗೌರವಯುತವಾಗಿಯೇ ಪಕ್ಷ ನಡೆಸಿಕೊಂಡಿದೆ. ಶಾಸಕರೂ ಆಗಿದ್ದವರು. ಅವತ್ತು ಎಲ್ಲರೂ ಒಳ್ಳೆಯವರಿದ್ದರು, ಈಗ ಯಾರು ಸರಿಯಿಲ್ಲ ಎನ್ನುತ್ತಿದ್ದಾರೆ. ಅವರು ಇಲ್ಲಿ ಇರುವುದು ಇಷ್ಟವಿಲ್ಲದಿದ್ದರೆ ಬೇರೆಡೆಗೆ ಹೋಗುವುದು ಅವರಿಗೆ ಬಿಟ್ಟ ವಿಚಾರ. ಆದರೆ ನಮ್ಮ ಪಕ್ಷದ ಬಗ್ಗೆ ಟೀಕೆ ಮಾಡುವ ನೈತಿಕತೆ ಅವರಿಗಿಲ್ಲ. ನಮ್ಮ ಮನೆಯನ್ನು ಅಚ್ಚುಕಟ್ಟಾಗಿಯೇ ಇಟ್ಟುಕೊಂಡಿದ್ದೇವೆ, ಮುಂದೆಯೂ ಇರಲಿದೆ ಎಂದರು.