ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದಟ್ಟ ಅಡವಿಯೊಳಗೆ ನಾಪತ್ತೆಯಾಗಿದ್ದ ಯುವಕ 8 ದಿನಗಳ ನಂತರ ಪ್ರತ್ಯಕ್ಷವಾದ ಘಟನೆ ಶನಿವಾರ ಅಮಾಸೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ತೊಂಬಟ್ಟುವಿನಲ್ಲಿ ನಡೆದಿದೆ.
ಇರ್ಕಿಗದ್ದೆ ಶೀನ ನಾಯ್ಕ ಅವರ ಪುತ್ರ ವಿವೇಕಾನಂದ (28) ಸೆ. 16ರ ಮಧ್ಯಾಹ್ನ ಕಂಬಕ್ಕಾಗಿ ಮರವೊಂದನ್ನು ಕಡಿದು ತರಲೆಂದು ಹೋಗಿದ್ದು, ದಾರಿ ತಪ್ಪಿ ಅರಣ್ಯದಲ್ಲಿ ಕಾಣೆಯಾಗಿದ್ದರು. ಶನಿವಾರ ಮನೆಯಿಂದ 4 ಕಿ.ಮೀ. ದೂರದ ಕಬ್ಬಿನಾಲೆಯ ಕಾಡಿನ ಸಮೀಪ ಪತ್ತೆಯಾಗಿದ್ದಾರೆ. ಅವರೊಂದಿಗೆ ತೆರಳಿದ್ದ ನಾಯಿ ಜತೆಗೇ ಇದ್ದು ಸ್ವಾಮಿನಿಷ್ಠೆ ಮೆರೆದಿದೆ.
ಸೆ. 16ರ ಮಧ್ಯಾಹ್ನ ವಿವೇಕಾನಂದ ಕಾಡಿಗೆ ಹೋಗಿದ್ದರು. ಜತೆಗೆ 2 ಸಾಕುನಾಯಿಗಳೂ ಹೋಗಿದ್ದವು. ಅದರಲ್ಲೊಂದು ಮರಳಿತ್ತು. ಮನೆಯವರಿಗೆ ಆತ ಕಾಡಿಗೆ ತೆರಳಿದ್ದು ಗೊತ್ತಿರಲಿಲ್ಲ. ಹಳೆಯ ಮಾಳಿಗೆ ಮನೆಯಾಗಿದ್ದರಿಂದ ಮಧ್ಯಾಹ್ನ ಊಟ ಮಾಡಿ ಮಹಡಿಯಲ್ಲಿ ಮಲಗಿರಬಹುದು ಅಂದು ಕೊಂಡಿದ್ದರು. ಸಂಜೆಯಾದಾಗ ಆತ ಕಾಣಿಸದ ಕಾರಣ ಆತಂಕಗೊಂಡ ಮನೆಯವರು ಅಕ್ಕಪಕ್ಕದವರಿಗೆ ಸುದ್ದಿ ತಿಳಿಸಿ ಹುಡುಕಾಟ ಆರಂಭಿಸಿದರು. ರಾತ್ರಿ 12ರ ವರೆಗೂ ಕಾಡಿನಲ್ಲಿ ನೂರಾರು ಜನ ಹುಡುಕಾಡಿದರು. ರವಿವಾರ ಅಮಾಸೆಬೈಲು ಪೊಲೀಸರು, ಅರಣ್ಯ ಇಲಾಖೆಯವರು ಸೇರಿ ಹುಡುಕಾಡಿದರು. ಬಳಿಕ ಶುಕ್ರವಾರದವರೆಗೆ ಪ್ರತೀ ದಿನ ನೂರಕ್ಕೂ ಮಿಕ್ಕಿ ಜನ ಹುಡುಕಾಡಿದರೂ ಪ್ರಯೋಜನ ಆಗಿರಲಿಲ್ಲ.
8ನೇ ದಿನವಾದ ಶನಿವಾರ ಮನೆಯಿಂದ 4 ಕಿ.ಮೀ. ದೂರದ ಕಾಡಿನ ಅಂಚಿನಲ್ಲಿದ್ದ ಕಬ್ಬಿನಾಲೆ ಜಗನ್ನಾಥ ಶೆಟ್ಟಿಗಾರ್ ಅವರ ಮನೆಯ ಬಳಿ ಕಾಡಿನಿಂದ ಇಳಿದು ಬರುತ್ತಿರುವ ಯುವಕನ್ನು ನೋಡಿದ ಮನೆಯವರು ಒಳಗೆ ಕರೆದೊಯ್ದು ಉಪಚರಿಸಿ ಊರಿನವರಿಗೆ ಮಾಹಿತಿ ನೀಡಿದರು. ಆಹಾರವಿಲ್ಲದೆ ತೀವ್ರ ಬಳಲಿದ್ದ ಆತನನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದ್ದಾರೆ.