ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದ ಅಧಿದೇವತೆ ಶ್ರೀ ಕುಂದೇಶ್ವರನ ಸನ್ನಿಧಿಯ ದೀಪೋತ್ಸವವು ಮಂಗಳವಾರ ಸಂಭ್ರಮದಿಂದ ಜರುಗಿತು.
ಭಾನುವಾರದಿಂದ ದೇವಳದಲ್ಲಿ ಪುಣ್ಯಾಹ ವಾಚನ, ದೇವನಾಂದಿ, ದ್ವಾದಶ ನಾರಿಕೇಳ ಮಹಾ ಗಣಪತಿ ಹೋಮ, ಸಂಪೂರ್ಣ ನವಗ್ರಹ ಹೋಮ, ದುರ್ಗಾ ಹೋಮ ಸಹಿತ ಲೋಕಕಲ್ಯಾಣಾರ್ಥವಾಗಿ ಸದ್ಯೋಜಾತಾದಿ ಅಧಿವಾಸ ಯಾಗ, ಪೂರ್ಣಾಹುತಿ ಬ್ರಹ್ಮಕಲಶಾಭಿಷೇಕ, ಮಹಾಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ಬಳಿಕ ಸಂಜೆ ಸಾಲಿಗ್ರಾಮ ಮಕ್ಕಳ ಮಹಿಳಾ ಕೋಟ ಇವರಿಂದ ವೀರಶ ಸೇನಾ ಯಕ್ಷಗಾನ ಕಾರ್ಯಕ್ರಮ ನಡೆಯಿತು.
ಮಂಗಳವಾರ ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ಕುಂದಾಪುರ ತಾಲೂಕಿನ ಭಜನಾ ಮಂಡಳಿಗಳ ಒಕ್ಕೂಟದಿಂದ ದೇವರ ನಾಮ ಸಂಕೀರ್ತನೆ ಮತ್ತು ಕುಣಿತ ಭಜನೆ ಕಾರ್ಯಕ್ರಮ ನಡೆಯಿತು.
ಕುಂದೇಶ್ವರ ದೇವರ ಸನ್ನಿಧಿಯಲ್ಲಿ ರಂಗಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗದ ಬಳಿಕ ಸಾವಿರಾರು ಭಕ್ತರ ಸಮ್ಮುಖದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ಪುಷ್ಪಕ ರಥದಲ್ಲಿ ಶ್ರೀದೇವರ ಪುರ ಮೆರವಣಿಗೆ, ಕಟ್ಟೆ ಪೂಜೆ, ಕೆರೆದೀಪ ಇತ್ಯಾದಿ ಕಾರ್ಯಕ್ರಮಗಳು ಜರುಗಿದವು.
ದೇವರ ಪುಷ್ಪಕ ರಥೋತ್ಸವದುದ್ದಕ್ಕೂ ಜಾನಪದ ಮತ್ತು ಸಾಂಸ್ಕೃತಿಕ ವೈಭವ ಪ್ರದರ್ಶನಗಳು ನಡೆದವು. ಸಂಜೆ 7 ರಿಂದ ನಿತ್ಯ ವಸಂತ ನಾಟ್ಯಾಲಯದ ಕಲಾವಿದರಿಂದ ನಿತ್ಯ ಸಂಚನ ಕಾರ್ಯಕ್ರಮ ನಡೆಯಿತು. ಸಾವಿರಾರು ಭಕ್ತರು ದೀಪೋತ್ಸವದಲ್ಲಿ ಪಾಲ್ಗೊಂಡರು. ದೀಪೋತ್ಸವದ ಅಂಗವಾಗಿ ಕುಂದಾಪುರ ಬೀದಿಗಳು ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದವು.