ಕುಂದಾಪ್ರ ಡಾಟ್ ಕಾಂ ಸುದ್ದಿ.
ಕಾರ್ಕಳ: ತ್ರಿಶಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಾರ್ಷಿಕೋತ್ಸವ ಸಮಾರಂಭ “ವಸುಧೈವ ಕುಟುಂಬಕಂ” ಎಂಬ ಕಲ್ಪನೆಯಲ್ಲಿ ಜರುಗಿತು.
ಸಮಾರಂಭದಲ್ಲಿ ಮಿಲಾಗ್ರಿಸ್ ಚರ್ಚ್‌ನ ಧರ್ಮಗುರುಗಳಾದ ವಲೇರಿಯನ್ ಮೆಂಡೊನ್ಸಾ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ, ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸಮಾಜದಲ್ಲಿ ಜವಾಬ್ದಾರಿಯುತವಾದ ಒಂದು ಸಮುದಾಯವನ್ನು ನಿರ್ಮಾಣ ಮಾಡುವ ಕನಸು ಕಂಡು ಉತ್ತಮ ರೀತಿಯಿಂದ ಮುನ್ನಡೆಯುತ್ತಿದೆ. ಉಡುಪಿ ಪ್ರಾಂತ್ಯದಲ್ಲಿ ಕ್ರಿಯೇಟಿವ್‌ನ ಹೆಸರು ಇತ್ತೀಚೆಗೆ ಎಲ್ಲ ಕಡೆ ಕೇಳಲಾರಂಭಿಸಿದೆ. ಉನ್ನತವಾದ ಯಶಸ್ಸು ಕೀರ್ತಿ ಲಭಿಸಲಿ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರಿಯೇಟಿವ್ ವಿದ್ಯಾಸಂಸ್ಥೆಯ ಸಹ ಸಂಸ್ಥಾಪಕರಲ್ಲಿ ಓರ್ವರಾದ ಡಾ. ಗಣನಾಥ ಶೆಟ್ಟಿಯವರು ಮಾತನಾಡಿ ವಿದ್ಯಾರ್ಥಿಗಳ ವಿಶೇಷವಾದ ಬೆಳವಣಿಗೆಗಳಿಗೆ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಮುಂಬರುವ ವಾರ್ಷಿಕ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಲಿ ಎಂದು ಆಶಿಸಿದರು.
ಸಹ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್, ಅಮೃತ್ ರೈ, ಆದರ್ಶ ಎಂ.ಕೆ, ವಿಮಲ್ ರಾಜ್ ಜಿ, ಗಣಪತಿ ಕೆ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅನೇಕ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ಪ್ರಾಂಶುಪಾಲರಾದ ಸ್ಟಾನಿ ಲೋಬೋ ವಾರ್ಷಿಕ ವರದಿ ವಾಚಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಉಪನ್ಯಾಸಕರ ಜೋಯೆಲ್ ಸ್ವಾಗತಿಸಿ. ಸೋನಾಲ ಕಾರ್ಯಕ್ರಮ ನಿರೂಪಿಸಿ ಉಪನ್ಯಾಸಕಿ ಶಿಲ್ಪಾ ಕ್ರಾಸ್ತಾ ವಂದಿಸಿದರು.