ಕುಂದಾಪುರ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿ ಮತ್ತು ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿ – ಇದರ ಸಂಯುಕ್ತ ಆಶ್ರಯದಲ್ಲಿ – ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ, ನಿವೇಶನ ರಹಿತರ ಬೃಹತ್ ಸಮಾವೇಶವು ನವಂಬರ್ 01 ರ ಅಪರಾಹ್ನ 3 ಗಂಟೆಗೆ ಗಂಗೊಳ್ಳಿ ಪೇಟೆ ವಿರೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಲಿರುವುದು.
ಕೋಟೇಶ್ವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರೂ-ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಮುಖಂಡ ಕರಿಯದೇವಾಡಿಗ ನಿವೇಶನ ರಹಿತರ ಬೃಹತ್ ಸಮಾವೇಶ ಉದ್ಘಾಟಿಸುತ್ತಾರೆ. ಕೃಷಿ ಕೂಲಿಕಾರರ ಸಂಘದ ತಾಲೂಕು ಅಧ್ಯಕ್ಷ ರಾಜೀವ ಪಡುಕೋಣೆ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಾರೆ.
ಜನಸಾಂದ್ರತೆಯ ಗಂಗೊಳ್ಳಿ ಜನ ನಿಬಿಡ ಪ್ರದೇಶದ ಬಡ ಮೀನುಗಾರ, ಕೃಷಿ ಕೂಲಿ ಕಾರ್ಮಿಕ ನಿವೇಶನ ರಹಿತರು ಈಗಾಗಲೇ ಸ್ಥಳೀಯ ಗ್ರಾಮ ಪಂಚಾಯತ್ ಕಛೇರಿಗೆ ನಿವೇಶನ ಹಕ್ಕು ಪತ್ರ ಕೋರಿ ಸಲ್ಲಿಸಿದ ಅರ್ಜಿಗಳನ್ನು ಈ ಕೂಡಲೇ ವಿಲೇವಾರಿ ಮಾಡಿ, ಭೂಮಿ ಹಕ್ಕು ಪತ್ರ ಮಂಜೂರು ಮಾಡುವುದಕ್ಕೆ ಸಮಾವೇಶದಲ್ಲಿ ಸರಕಾರವನ್ನು ಒತ್ತಾಯಿಸಲಾಗುವುದು. ನಿವೇಶನ ಹಕ್ಕು ಪತ್ರಕ್ಕಾಗಿ ಗಂಗೊಳ್ಳಿ ಗ್ರಾಮ ಪಂಚಾಯತ್ ಕಛೇರಿ ಮುತ್ತಿಗೆ ಹೋರಾಟಕ್ಕೆ ಕಾರ್ಯಕ್ರಮ ರೂಪಿಸಲಾಗುವುದು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.