ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ವಿನಾಯಕ ಯುವಕ ಸಂಘ ರಿ. ನೆಂಪು ರಜತ ಮಹೋತ್ಸವದ ಪ್ರಯುಕ್ತ ನೆಂಪು ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನೆಂಪು ಉತ್ಸವ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯರಾದ ಬಿ.ವೈ ರಾಘವೇಂದ್ರ ಮಾತನಾಡಿ, ದೇವಭಕ್ತಿ ಮತ್ತು ದೇಶಭಕ್ತಿ ಇಂದಿನ ಯುವಕರ ಆದ್ಯತೆ ಆಗಬೇಕು. ಪರರ ನೋವಿಗೆ ಸ್ಪಂದಿಸುವ ಮತ್ತು ಸಾಧನೆಯನ್ನು ಪ್ರೋತ್ಸಾಹಿಸುವ ಗೌರವಿಸುವ ಯುವಕರು ದೇಶದ ಆಸ್ತಿ. ಯುವಕರು ದೇಶಭಕ್ತಿಯನ್ನು ರೂಢಿಸಿ ಕೊಂಡಾಗ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಂಪು ಶ್ರೀ ವಿನಾಯಕ ಯುವಕ ಸಂಘದ ಅಧ್ಯಕ್ಷ ಅರುಣ್ ಮೊಗವೀರ ನೆಂಪು ವಹಿಸಿದ್ದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರಿಗೆ ರಜತ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಉದ್ಯಮಿ ಸೀತಾರಾಮ್ ಶೆಟ್ಟಿ ನೆಂಪು, ಶ್ರೀನಿವಾಸ್ ಮೆಂಡನ್ ಬಳ್ಳಿಹಿತ್ತಲು, ಶಿವರಾಮ್ ಮಂಗಲಸನಕಟ್ಟೆ ಇವರಿಗೆ ಹುಟ್ಟೂರ ಸನ್ಮಾನ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವೈದ್ಯರಾದ ಡಾ. ರಾಮಮೂರ್ತಿ ಭಟ್, ಡಾಕ್ಟರೇಟ್ ಪದವಿ ಪುರಸ್ಕೃತ ಡಾ.ವೆಂಕಟರಾಮ್ ಭಟ್, ಕಾಮನ್‌ವೇಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತರಾದ ಗುರುರಾಜ್ ಪೂಜಾರಿ ಜಡ್ಡು ವಂಡ್ರೆ, ಅಂತರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರ ನವೀನ್ ಕಾಂಚನ್, ಭಾರತೀಯ ಸೇನೆಗೆ ಸೇರ್ಪಡೆಗೊಂಡ ಅಭಿಜಿತ್ ಮೊಗವೀರ ಬಗ್ವಾಡಿ, ರಕ್ತದಾನಿ ಹಾಗೂ ಕೊರೋನಾ ಫ್ರಂಟ್‌ಲೈನ್ ವಾರಿಯರ್ ರಾಘವೇಂದ್ರ ನೆಂಪು, ಆಶಾ ಕಾರ್ಯಕರ್ತೆ ಚಂದ್ರಾವತಿ, ರಾಷ್ಟ್ರಮಟ್ಟದ ಕರಾಟೆ ಪಟು ಶ್ರೀಶ ಗುಡ್ರಿ, ಪ್ರವೀಣ್ ನೆಂಪು, ರಾಜ್ಯ ಮಟ್ಟದ ಕ್ರೀಡಾ ಪ್ರತಿಭೆ ಶರಣ್ಯ ನೆಂಪು ಇವರನ್ನು ಸನ್ಮಾನಿಸಲಾಯಿತು.
ಸಹಾಯಹಸ್ತ ಕಾರ್ಯಕ್ರಮದ ಅಂಗವಾಗಿ ಅಶಕ್ತರಿಗೆ ಅನಾರೋಗ್ಯ ಪೀಡಿತರಿಗೆ ನೆರವು ನೀಡಲಾಯಿತು. ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟೆಹೊಳೆ, ಉದ್ಯಮಿಗಳಾದ ಬಿ.ಎನ್ ಶೆಟ್ಟಿ ಬಗ್ವಾಡಿ ಮೆತ್ತಿನಮನೆ, ಗೋವಿಂದ ಬಾಬು ಪೂಜಾರಿ, ಕೃಷ್ಣಪ್ರಸಾದ್ ಅಡ್ಯಂತಾಯ, ರಾಜು ಮೆಂಡನ್ ಬಳ್ಳಿಹಿತ್ಲು, ಭಾಸ್ಕರ್ ಮಂಡನ್ ಬಳ್ಳಿಹಿತ್ಲು, ಪ್ರವೀಣ್ ಕುಮಾರ್ ಶೆಟ್ಟಿ ಉಳ್ಳೂರು, ಸಂತೋಷ್ ಕುಮಾರ್ ಶೆಟ್ಟಿ, ಗೋಪಾಲ್ ನಾಯ್ಕ ಶಾರಾಳ, ದೀಪಕ್ ಕುಮಾರ್ ಶೆಟ್ಟಿ ಬೈಂದೂರು, ಸದಾನಂದ ಉಪ್ಪಿನಕುದ್ರು, ಕರ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿಜ್ರಿ ರಾಜೀವ್ ಶೆಟ್ಟಿ, ರಾಜೀವ್ ನಾಯ್ಕ, ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ವಿನಾಯಕ ಯುವಕ ಸಂಘದ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಸ್ವಾಗತಿಸಿದರು. ಮಂಜುನಾಥ್ ಚಂದನ್ ನೆಂಪು ವಂದಿಸಿದರು. ನೇರಳಕಟ್ಟೆ ಸಂಗೀತ ವಿದ್ಯಾಲಯದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ದಾಮೋದರ್ ಶರ್ಮ ಬಾರಕೂರು ಕಾರ್ಯಕ್ರಮ ನಿರೂಪಿಸಿದರು.
ಉತ್ಸವದ ಅಂಗವಾಗಿ ನೆಂಪು ಶ್ರೀ ಗಣಪತಿ ದೇವರಿಗೆ ಮಹಾ ರಂಗಪೂಜೆ ಸೇವೆ ಸಲ್ಲಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತೆಂಕು-ಬಡಗು ಸ್ಪರ್ಧಾತ್ಮಕ ಗಾನ ವೈಭವ ಯಕ್ಷ ಕಂಪು ಪ್ರಖ್ಯಾತ ಕಲಾವಿದರಿಂದ ನೆರವೇರಿತು. ಝೀ ಕನ್ನಡ ಡ್ರಾಮಾ ಜೂನಿಯರ್ಸ್ ವಿಜೇತೆ ಸಮೃದ್ಧಿ ಕುಂದಾಪುರ, ರಾಷ್ಟ್ರಮಟ್ಟದ ನೃತ್ಯ ಕಲಾವಿದರು ಕುಮಾರಿ ಸಿಂಚನ ನೆಂಪು ಕುಮಾರಿ ಪ್ರಾರ್ಥನಾ ನೆಂಪು ಅವರಿಂದ ಭರತನಾಟ್ಯ ಜುಗಲ್ ಬಂಧಿ, ಶ್ರೇಷ್ಠ ದೇವಾಡಿಗ ಅವರಿಂದ ಭರತನಾಟ್ಯ, ಪ್ರಸಿದ್ಧ ಸಿನಿ ಗಾಯಕರ ಸಂಗೀತೋತ್ಸವ ಎಕ್ಷ್ಮೀಮ್ ಡ್ಯಾನ್ಸ್ ಅಕಾಡೆಮಿ ಉಡುಪಿ ಇವರಿಂದ ನೃತ್ಯೋತ್ಸವ ಮತ್ತು ಕಲಾಚಿಗುರು ತಂಡ ಹಳ್ಳಾಡಿ ಇವರಿಂದ ಹೆಂಗಸ್ರ ಪಂಚೈತಿ ನೆರವೇರಿತು.