ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಮಾ12: ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುವ ವಿಚಾರವನ್ನು ಖಚಿತಪಡಿಸಿದ್ದಾರೆ. ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ.
ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಟಿಕೇಟ್ ಕೈತಪ್ಪಿದಾಗಿನಿಂದ ಬಿಜೆಪಿ ಪಕ್ಷದ ಮೇಲೆ ಮುನಿಸಿಕೊಂಡಿದ್ದ ಬಿ.ಎಂ. ಸುಕುಮಾರ ಶೆಟ್ಟಿ ಅವರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ತೋಡಿಕೊಂಡಿರುವುದಲ್ಲದೇ ಪಕ್ಷ ತೊರೆಯುವುದಾಗಿ ಹೇಳಿಕೊಂಡಿದ್ದರು. ಕೆಲ ತಿಂಗಳುಗಳ ಹಿಂದೆಯೇ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ನಿನ್ನೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ್ದರು.
2012ರ ಚುನಾವಣೆಗೂ ಪೂರ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡು ಕಾಂಗ್ರೆಸ್ನ ಕೆ. ಗೋಪಾಲ ಪೂಜಾರಿ ಅವರ ವಿರುದ್ಧ ಪರಾಭವಗೊಂಡಿದ್ದ ಬಿ.ಎಂ. ಸುಕುಮಾರ ಶೆಟ್ಟಿ ಅವರು ಮತ್ತೆ 2018ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.
► ಕಾಂಗ್ರೆಸ್‌ನೊಂದಿಗೆ ಕೈಜೊಡಿಸಿದ ಜೆ.ಪಿ. ಹೆಗ್ಡೆ: ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗುವ ಸಾಧ್ಯತೆ? – https://kundapraa.com/?p=71319 .
ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರ ವಿರುದ್ಧ ಆಗಾಗ್ಗೆ ಅಸಮಾಧಾನ ಏಳುತ್ತಿತ್ತು. 2023ರ ಚುನಾವಣೆಯಲ್ಲಿ ಸುಕುಮಾರ ಶೆಟ್ಟರಿಗೆ ಟಿಕೇಟ್ ನೀಡಬಾರದು ಎಂದು ಮೂಲ ಬಿಜೆಪಿಗರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದರು. ಈ ನಡುವೆ ಪಕ್ಷದಿಂದಲೂ ಟಿಕೇಟ್ ನಿರಾಕರಿಸಿದ್ದರಿಂದ ಬಿ.ಎಂ. ಸುಕುಮಾರ ಶೆಟ್ಟಿ ಅವರು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡದೇ ಮೌನವಹಿಸಿದ್ದರು. ತಮ್ಮ ರಾಜಕೀಯ ಗುರು ಬಿ.ಎಸ್. ಯಡಿಯೂರಪ್ಪನವರ ಆದಿಯಾಗಿ ಯಾರ ಮಾತಿಗೂ ಜಗ್ಗದೇ ಚುನಾವಣೆಯಲ್ಲಿ ಸೈಲೆಂಟ್ ಆಗಿದ್ದರು. ಅಲ್ಲಿಂದಲೇ ಕಾಂಗ್ರೆಸ್ ಸೇರುತ್ತಾರೆ ಎಂಬ ಸೂಚನೆಗಳು ದೊರೆತಿತ್ತಾದರೂ, ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ.ಅಂತಿಮವಾಗಿ ಊಹಾಪೋಹಗಳಿಗೆ ತೆರೆಬಿದ್ದಿದೆ.
ಕೊಲ್ಲೂರು ಕ್ಷೇತ್ರದ ಮೇಲೆ ಕಣ್ಣು?
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಧರ್ಮದರ್ಶಿಯಾಗಿ ಸೇವೆ ಸಲ್ಲಿಸಿದ್ದ ಬಿ.ಎಂ. ಸುಕುಮಾರ ಶೆಟ್ಟಿ ಅವರ ಮತ್ತೆ ಧರ್ಮದರ್ಶಿಯಾಗುವ ರೇಸ್‌ನಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದವಿಗೆ ಭಾರಿ ಪೈಪೋಟಿ ವ್ಯಕ್ತವಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಥವಾ ವಿಧಾನ ಪರಿಷತ್ ಹುದ್ದೆಯ ಆಕಾಂಕ್ಷಿ ಎಂಬ ಮಾತುಗಳೂ ಕೇಳಿಬರುತ್ತಿವೆ. ಸದ್ಯ ಪಕ್ಷದ ಮುಂದೆ ಯಾವುದೇ ಬೇಡಿಕೆ ಇರಿಸಿಲ್ಲ ಎಂದಿರುವ ಸುಕುಮಾರ ಶೆಟ್ಟಿ ಅವರ ಮುಂದಿನ ನಡೆ ಏನು ಎಂಬುದನ್ನು ಕಾದುನೋಡಬೇಕಿದೆ.
ಶಾಲಾ ದಿನಗಳಿಂದಲೂ ನಾನು ಅವರನ್ನು ಬಲ್ಲೆ. ಕಳೆದ ಬಾರಿ ಅವರು ಬಿಜೆಪಿಯಲ್ಲಿರುವುದು ಅಚ್ಚರಿ ಮೂಡಿಸಿತ್ತು. ಶಾಲಾ ದಿನಗಳಿಂದಲೂ ಅವರು ಕಾಂಗ್ರೆಸ್ ರಾಜಕಾರಣಿಯಂತೆ. ಈಗ ಅವರು ಸರಿಯಾದ ಸ್ಥಳದಲ್ಲಿದ್ದಾರೆ.