ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಕೊಂಕಣಿ ಖಾರ್ವಿ ಸಮಾಜದ ಆರಾಧ್ಯ ಕ್ಷೇತ್ರ ಖಾರ್ವಿಕೇರಿ ಶ್ರೀಮಹಾಕಾಳಿ ಅಮ್ಮನವರ ಸನ್ನಿಧಿಯಲ್ಲಿ ಬಣ್ಣದ ಅಲಂಕಾರ ಪೂಜೆ ನೆರವೇರಿತು.
ಹೋಳಿ ಉತ್ಸವ ಕೊನೆಯ ಆಚರಣೆ ಯ ಈ ವಿಶೇಷ ಪೂಜಾ ವಿಧಿಯಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. 6 ದಿನಗಳ ಹೋಳಿ ಉತ್ಸವದ ಕೊನೆಯ ದಿನ ಶ್ರೀ ದೇವರಿಗೆ ವಿಶೇಷ ಅಭಿಷೇಕದ ಬಳಿಕ ಬಣ್ಣಗಳಿಂದ ಅಲಂಕರಿಸಲಾಯಿತು. ನಾನಾ ಬಣ್ಣಗಳನ್ನು ದೇವಿಯ ಸಮ್ಮುಖ ಇಟ್ಟು ಮಂಗಳಾರತಿ ಬೆಳಗ ಲಾಯಿತು. ಬಣ್ಣದ ನೀರಿನ ವೈವೇದ್ಯ ಬಳಿಕ ಭಕ್ತರಿಗೆ ಸಮರ್ಪಿಸಿ ಹಂಚಲಾಯಿತು. ಬಣ್ಣ ಹಾಗೂ ಬಣ್ಣದ ನೀರನ್ನು ಪ್ರಸಾದವಾಗಿ ಸ್ವೀಕರಿಸಿದ ಭಕ್ತರು ಸಮಾಜದ ಪ್ರತಿ ಮನೆಗಳಿಗೂ ವಿತರಿಸಿ, ಪರಸ್ಪರ ಹಚ್ಚಿಕೊಂಡು ಸಂಭ್ರಮಿಸಿದರು.
ಸಾಂಪ್ರದಾಯಿಕ ಗುಮಟೆ ವಾದನದೊಂದಿಗೆ ದೇವಳಕ್ಕೆ ಆಗಮಿಸಿದ ಭಕ್ತರು, ಸಂಜೆಯ ವೇಳೆಗೆ ಕುಂದಾಪುರ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೋಳಿ ಹಬ್ಬವನ್ನು ಸಂಭ್ರಮಿಸಿದರು.
ಈ ಈ ಸಂದರ್ಭ ದೇವಳದ ಅಧ್ಯಕ್ಷ ಜಯಾನಂದ ಖಾರ್ವಿ, ಖಜಾಂಚಿ ರಾಜು ನಾಯ್ಕ, ಮೊತ್ತೇಸರರಾದ ಶಂಕರ ಕೊಗ್ಗಿ ನಾಯ್ಕ, ಪಾಂಡುರಂಗ ರುಕ್ಷ ಸಾರಂಗ, ಕೊಗ್ಗ ನಾಯ್ಕ ಮತ್ತಿತರರು ಉಪಸ್ಥಿತ ರಿದ್ದರು.