ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಅವರ ಆಶ್ರಯದಲ್ಲಿ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಕೊಡಮಾಡುವ ಡಾ. ಶಿವರಾಮ ಕಾರಂತ ವಿಶೇಷ ಸಾಧಕ ಸ್ತ್ರೀ ಪುರಸ್ಕಾರಕ್ಕೆ ಕುಂದಾಪುರದ ವಿಶೇಷ ಚೇತನ ಯುವತಿ ಸೃಜನಾ ಎಸ್ ಪಿ ಅವರನ್ನು ಆಯ್ಕೆ ಮಾಡಲಾಗಿದೆ.
ಹುಟ್ಟು ಕಿವುಡುತನದೊಂದಿಗೆ ಮೂಕಿಯಾಗಿರುವ ದಿಟ್ಟ ಹುಡುಗಿಯೊಬ್ಬಳು ತನ್ನ ಅಹರ್ನಿಶಿ ಶ್ರಮದೊಂದಿಗೆ ತನ್ನ ಕನಸನ್ನು ಬೆನ್ನೇರಿಕೊಂಡು ಸಾಧನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ. ಕ್ರಿಕೆಟ್ ಎಂದರೆ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ಈಕೆ ಹರಿಯಾಣದಲ್ಲಿ ನಡೆಯಲಿರುವ ಟಿ-10 ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆ ಆಗುವುದರ ಮೂಲಕ ವಿಶೇಷ ಚೇತನ ಮಕ್ಕಳಿಗೆಲ್ಲ ರೋಲ್ ಮಾಡಲ್ ಆಗುವುದರ ಮೂಲಕ ಪ್ರಯತ್ನಕ್ಕಿಂತ ದೊಡ್ಡದು ಯಾವುದು ಇಲ್ಲ ಎಂಬ ಸಾಧನೆಯ ಮೂಲಕ ಆಲ್ ಇಂಡಿಯಾ ಸ್ಪೋರ್ಟ್ಸ್ ಕೌನ್ಸಿಲ್ ಆಫ್ ದಿ ಡೆಫ್ ಆಯೋಜಿಸಿರುವ ಪ್ರಥಮ ರಾಜ್ಯ ಮಟ್ಟದ ಟಿ-10 ಮಹಿಳೆಯರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅವರು ಕರ್ನಾಟಕ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದಾರೆ.
ಕುಂದಾಪುರದ ವಿಠಲವಾಡಿಯ ನಿವಾಸಿ ಸುಧಾಕರ ಪೂಜಾರಿ ಮತ್ತು ಸವಿತಾ ದಂಪತಿಯ ಏಕೈಕ ಪುತ್ರಿ ಯಾಗಿರುವ ಇವರು ಓದುವಿಕೆಯಲ್ಲಿ ಮುಂಚೂಣಿಯಲ್ಲಿದ್ದು ಕ್ರೀಡೆಯನ್ನು ಬದುಕಿನ ಅವಿಭಾಜ್ಯ ಅಂಗವೆಂದೆ ತಿಳಿದುಕೊಂಡು ಸಾಂಸ್ಕೃತಿಕ ಕ್ಷೇತದಲ್ಲಿ ಅಭಿನಯ, ನೃತ್ಯದ ಮೂಲಕ ಗುರುತಿಸಿಕೊಂಡಿದ್ದಲ್ಲದೇ ಚಿತ್ರಕಲೆ ಹಾಗೂ ಜಿಲ್ಲಾ ಮಟ್ಟದ ಶಾಟ್ ಪುಟ್ ನಲ್ಲಿ ಪ್ರಥಮ ಸ್ಥಾನದೊಂದಿಗೆ ತನ್ನ ಬಹುಮುಖ ಪ್ರತಿಭೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುತ್ತಾರೆ. “ಮಾಯಾ ಜಿಂಕೆ” ನಾಟಕದ ಜಿಂಕೆ ಪಾತ್ರ ಇವರಿಗೆ ಉತ್ತಮ ಹೆಸರು ತಂದು ಕೊಟ್ಟಿತು. 1ರಿಂದ 8 ನೇ ತರಗತಿಯ ತನಕ ಅಂಪಾರು ಮೂಡುಬಗೆ ವಾಗೋತಿ ವಿಶೇ? ಶಾಲೆಯಲ್ಲಿ ಕಲಿಕೆಯ ನಂತರ 9 ಮತ್ತು 10 ತರಗತಿಯನ್ನು ಮೈಸೂರಿನ ಪುಟ್ಟಿ ವೀರಮ್ಮ ಶಾಲೆಯಲ್ಲಿ ಪೂರೈಸಿದ್ದಾರೆ. ಪ್ರತಿಯೊಂದರ ಬಗ್ಗೆ ಆಸಕ್ತಿಯಿಂದ ನೋಡುವ ಇವರು ಕಲಿಕೆ, ಚಿತ್ರಕಲೆ, ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಈವರೆಗೆ ಸುಮಾರು 55 ಮಿಕ್ಕಿ ಬಹುಮಾನ ಗಳಿಸಿರುತ್ತಾರೆ.
ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ನಡೆಯುವ ಮಹಿಳಾ ದಿನಾಚರಣೆಯ ಅಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.