ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಪುಸ್ತಕ ಓದುವ ಅಭಿರುಚಿ ಜತೆಗೆ ಶಿಕ್ಷಣ, ಜ್ಞಾನಾರ್ಜನೆಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಶುರುವಾದ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ “ಪುಸ್ತಕ ಮನೆ” ಮೂಡುಬಿದಿರೆಯಲ್ಲಿ ತನ್ನ ಎರಡನೇ ಪುಸ್ತಕ ಮಳಿಗೆಯನ್ನು ಲೋಕಾರ್ಪಣೆ ಮಾಡಿದೆ.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಡಾ.ಎಂ. ಮೋಹನ್ ಆಳ್ವ, ಎಕ್ಸಲೆಂಟ್ ಸಂಸ್ಥೆಯ ಮುಖ್ಯಸ್ಥರಾದ ಯುವರಾಜ್ ಜೈನ್ , ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ರವರು ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು.
ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್, ಡಾ. ಗಣನಾಥ ಶೆಟ್ಟಿ ಬಿ , ಅಮೃತ್ ರೈ, ಅಶ್ವಥ್ ಎಸ್.ಎಲ್, ಆದರ್ಶ ಎಂ. ಕೆ , ವಿಮಲ್ ರಾಜ್ ಜಿ , ಗಣಪತಿ ಕೆ. ಎಸ್ ರವರು ಉಪಸ್ಥಿತರಿದ್ದು, ಗಣ್ಯರನ್ನು ಇದೇ ವೇಳೆ ಸನ್ಮಾನಿಸಿ ಗೌರವಿಸಲಾಯಿತು.
ಕರ್ನಾಟಕದಲ್ಲಿ ಪುಸ್ತಕ ಲೋಕದಲ್ಲಿ ಪುಸ್ತಕಮನೆ ಹೊಸ ಮೈಲುಗಲ್ಲು ಸಾಧಿಸಿದ್ದು, ಕರಾವಳಿಯಲ್ಲಿ ತನ್ನ ಎರಡನೇ ಮಳಿಗೆ ಶುರುಮಾಡಿದೆ.
ನೂರಾರು ಬರಹಗಾರರ ಪುಸ್ತಕಗಳು, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಸೇರಿ ಎಲ್ಲಾ ಕ್ಷೇತ್ರದ ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳು, ಮಕ್ಕಳ ಶಿಕ್ಷಣ, ಆಟಿಕೆ, ಗಿಫ್ಟ್, ಅಧ್ಯಯನ ಸಾಮಾಗ್ರಿಗಳ ಬೃಹತ್ ಮಳಿಗೆ ಇದಾಗಿದೆ.
ಪುಸ್ತಕ ಲೋಕಕ್ಕೆ ಬಹುದೊಡ್ಡ ಕೊಡುಗೆ: ಡಾ. ಎಂ. ಮೋಹನ್ ಆಳ್ವ.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಡಾ. ಎಂ.ಮೋಹನ್ ಆಳ್ವ ರವರು ಮಾತನಾಡಿ, ಪುಸ್ತಕ ಮನೆ ನೂತನ ಅಭಿರುಚಿ ಮತ್ತು ಒಳ್ಳೆಯ ವ್ಯಕ್ತಿತ್ವ ಬೆಳೆಸುವ ಪುಸ್ತಕಗಳ ಓದಿಗೆ ಅನುಕೂಲವಾಗುವಂತೆ ಕ್ರಿಯೇಟಿವ್ ಪುಸ್ತಕ ಮನೆಯ ಪುಸ್ತಕ ಮಳಿಗೆ ಆರಂಭವಾಗಿದ್ದು ಸಂತಸದ ವಿಷಯ. ಮೂಡುಬಿದಿರೆಯಲ್ಲಿ ಪುಸ್ತಕಗಳು ಸಿಗುವ ವ್ಯವಸ್ಥೆಯಲ್ಲಿ ನ್ಯೂನ್ಯತೆ ಇತ್ತು. ಈಗ ಮೊದಲ ಪುಸ್ತಕ ಮಳಿಗೆಯನ್ನು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಆರಂಭಿಸಿ ಜ್ಞಾನಾರ್ಜನೆಗೆ ಅವಕಾಶ ಮಾಡಿಕೊಟ್ಟಿದೆ ಎಂದು ಬಣ್ಣಿಸಿದರು.
ಮೂಡುಬಿದಿರೆಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಸುಮಾರು 45 ಸಾವಿರ ವಿದ್ಯಾರ್ಥಿಗಳು, ಉಪನ್ಯಾಸಕರು, ಪೋಷಕರಿದ್ದು, ಇದು ವಿದ್ಯಾವಂತರ ಊರಾಗಿದೆ . ಇಂದಿನ ಯುವ ಜನತೆ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಡಿಜಿಟಲ್ ಅಥವಾ ಮೊಬೈಲ್ ಶಾಶ್ವತವಲ್ಲ. ಪುಸ್ತಕಗಳು ಈಗ ಅನಿವಾರ್ಯ. ಗಾಳಿ, ನೀರು, ಮಣ್ಣು ಹೇಗೋ ಹಾಗೇ ಪುಸ್ತಕಗಳು ವಿದ್ಯಾವಂತರಿಗೆ ಅಗತ್ಯ. ಇದು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಬಹಳ ಒಳ್ಳೆಯ ಕೆಲಸ ಎಂದರು.
ನಮ್ಮಲ್ಲಿ ಪುಸ್ತಕ ಬರೆಯುವ ಬೇಕಾದಷ್ಟು ಲೇಖಕರಿದ್ದಾರೆ. ಸಂಸ್ಕೃತಿ, ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಜನ ತೊಡಗಿಸಿಕೊಳ್ಳುತ್ತಿದ್ದಾರೆ. ಓದುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ ಜನರು ಡಿಜಿಟಲ್ ಬಲಿಪಶು ಆಗದೆ, ಪುಸ್ತಕಗಳನ್ನು ಓದಿ, ಅವುಗಳ ಸಂಗ್ರಹವನ್ನು ಮಾಡಿಕೊಳ್ಳಬೇಕು. ಎಲ್ಲರೂ ಓದಬೇಕು, ಪುಸ್ತಕ ನಮ್ಮ ಬದುಕನ್ನು ಬದಲಾವಣೆ ಮಾಡುತ್ತಿದೆ, ಪುಸ್ತಕ ಮನೆ ವಿದ್ಯಾರ್ಥಿಗಳಿಗೆ, ಜ್ಞಾನಿಗಳಿಗೆ ಅವಕಾಶ ನೀಡಲಿ ಎಂದು ಶುಭ ಹಾರೈಸಿದರು.
ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸಾಧನೆಗೆ ಮೆಚ್ಚುಗೆ
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಯುವರಾಜ್ ಜೈನ್ ರವರು ಮಾತನಾಡಿ, ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬಂತೆ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ 7 ಜನ ಸಂಸ್ಥಾಪಕರು ಪುಸ್ತಕ ಓದಿಸುವ ಮಾದರಿ ಕೆಲಸ ಮಾಡಿದ್ದಾರೆ. ಇದು ಮೂಡುಬಿದಿರೆಯ ಜನತೆಗೆ ಜ್ಞಾನದ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದರು.
ರಶ್ಮಿತಾ ಯುವರಾಜ್ ಜೈನ್ ರವರು ಮಾತನಾಡಿ ಸರಸ್ವತಿಯನ್ನು ಭಾರತದಲ್ಲಿ ಪುಸ್ತಕದ ಮೂಲಕ ನೋಡುತ್ತೇವೆ. ಮೂಡುಬಿದಿರೆ ಯಲ್ಲಿ ಪುಸ್ತಕಗಳನ್ನು ಸಿಗುವಂತೆ ಮಾಡಿದ ಪುಸ್ತಕ ಮನೆ ಸಂಸ್ಥೆಗೆ ಧನ್ಯವಾದಗಳನ್ನು ತಿಳಿಸಿದರು. ಡಾ. ಎಂ.ಮೋಹನ್ ಆಳ್ವ ಅವರು ಸಮಾಜಕ್ಕೆ ವಿದ್ಯೆ, ಸಂಸ್ಕೃತಿಯನ್ನು ನೀಡಿದ್ದಾರೆ. ಈಗ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಪುಸ್ತಕ ಸೇವೆ ನೀಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕ್ರಿಯೇಟಿವ್ ಕಾಲೇಜಿನ ಉಪನ್ಯಾಸಕ ವರ್ಗದವರು, ಬೋಧಕೇತರ ವೃಂದದವರು ಅಲ್ಲದೇ ಸಾರ್ವಜನಿಕರೂ ಸಮಾರಂಭದಲ್ಲಿ ಭಾಗಿಗಳಾಗಿದ್ದರು. ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕರಾದ ಶ್ರೀಯುತ ಲೋಹಿತ್ ಎಸ್. ಕೆ ಇವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.