ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಮೇ.14: ತಾಲೂಕಿನಾದ್ಯಂತ ಇಂದು ಸಂಜೆ ಕೆಲಕಾಲ ಗುಡುಗು ಸಿಡಿಲು ಸಹಿತ ಮಳೆಯಾಗಿದ್ದು, ಕುಂದಾಪುರ ತಾಲೂಕಿನ ಸಿದ್ಧಾಪುರ ಭಾಗದಲ್ಲಿ ಗಾಳಿ ಮಳೆಗೆ ಹಾ̧ನಿ ಸಿಡಿಲಿಗೆ ವ್ಯಕ್ತಿಯೋರ್ವ ಮೃತಪಟ್ಟಿರುವ ಹಾಗೂ ಮನೆಗಳಿಗೆ ಹಾನಿಯಾದ ಘಟನೆ ನಡೆದಿದೆ.
ತಾಲೂಕಿನ ಮಲೆನಾಡು ಪ್ರದೇಶದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಸಿಡಿಲು ಸಹಿತ ಗಾಳಿ ಮಳೆ ಸುರಿದಿದ್ದರೇ, ಕರಾವಳಿ ಪ್ರದೇಶದಲ್ಲಿ ಸಾಧಾರಣ ಮಳೆಯಾಗಿದೆ.

ಇಂದು ಸಂಜೆಯ ವೇಳೆಗೆ ಸಿಡಿಲು ಬಡಿದು ಸಿದ್ಧಾಪುರ ಗ್ರಾಮದ ಸ್ವಾಮಿಹಾಡಿಯ ಸುರೇಶ್ ಶೆಟ್ಟಿ (38) ಮೃತಪಟ್ಟ ಘಟನೆ ನಡೆದಿದೆ. ಸುರೇಶ್ ಶೆಟ್ಟಿ ಅವರು ತನ್ನ ಕಿರಿಯ ಮಗನೊಂದಿಗೆ ತನ್ನ ಮನೆಯ ಸಮೀಪವೇ ಇದ್ದ ಮಾವಿನ ಮರದಿಂದ ಮಾವಿನಹಣ್ಣು ತರಲು ತೆರಳಿದ್ದರು. ಈ ವೇಳೆ ಅವರ ಎದೆಯ ಭಾಗಕ್ಕೆ ಏಕಾಏಕಿ ಅವರಿಗೆ ಸಿಡಿಲು ಬಡಿದಿದೆ. ಅಸ್ವಸ್ಥಗೊಂಡು ಬಿದ್ದಿದ್ದ ಅವರನ್ನು ಬದುಕಿಸುವ ಪ್ರಯತ್ನ ಮಾಡಲಾಗಿತ್ತಾದರೂ, ಇದೇ ವೇಳೆ ಸಿದ್ಧಾಪುರ ಭಾಗದಲ್ಲಿ ಸಿಡಿಲಿನ ಕಾರಣಕ್ಕೆ ನೆಟ್ವರ್ಕ್ ಸಮಸ್ಯೆ ಎದುರಾಗಿದ್ದರಿಂದ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಆಸ್ಪತ್ರೆಗೆ ಕರೆದೊಯ್ಯಲು ವಿಳಂಬವಾಗಿದ್ದರಿಂದ ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಅದೃಷ್ಟವಶಾತ್ ಅವರೊಂದಿಗಿದ್ದ ಕಿರಿಯ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಿರಿಯ ಮಗನ ಹುಟ್ಟುಹಬ್ಬಕ್ಕೆಂದು ನಿನ್ನೆಯಷ್ಟೇ ಅವರು ಬೆಂಗಳೂರಿನಿಂದ ಬಂದಿದ್ದರು.

ಒಂದೇ ಸಮನೆ ಬೀಸಿದ ಸುಂಟರಗಾಳಿಗೆ ಹೊಸಂಗಡಿ ಗ್ರಾಮದ ಪ್ರೇಮ ಆಚಾರಿ ಅವರ ವಾಸದ ಮನೆಯ ಮೆಲ್ಚಾವಣಿ ಸಂಪೂರ್ಣ ಹಾರಿ ಹೋಗಿ ಅಂದಾಜು ರೂ.50,000 ಹಾನಿಯುಂಟಾಗಿದೆ. ಈ ವೇಳೆ ಮನೆಯಲ್ಲಿ ಇದ್ದವರಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ. ಉಳ್ಳೂರು 74 ಗ್ರಾಮದ ಅಬ್ಬಿಬೇರು ನಿವಾಸಿ ಲಚ್ಚ ಹಾಂಡ್ತಿ ಅವರ ಕಚ್ಚಾ ವಾಸದ ಮನೆಯ ಸಿಮೆಂಟ್ ಶೀಟ್ ಹಾರಿಹೋಗಿ ರೂ.65,000 ನಷ್ಟವಾಗಿದೆ. ಉಳ್ಳೂರು 74 ಗ್ರಾಮದ ಶಂಕರ ಮಂಡಿವಾಳ ಅವರ ಮನೆಗೆ ಸಿಡಿಲು ಬಡಿದ ಅಂದಾಜು ರೂ.10,000 ನಷ್ಟುವುಂಟಾಗಿದೆ.
ಸಿದ್ಧಾಪುರ ಭಾಗದಲ್ಲಿ ಮಳೆ ಸಿಡಿಲಿನ ಅಬ್ಬರಕ್ಕೆ ಕೆಲಕಾಲ ಮೊಬೈಲ್ ನೆಟ್ವರ್ಕ್ ಸ್ಥಗಿತಗೊಂಡಿದ್ದರೇ, ಬಹುತೇಕ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯವಾಗಿದೆ.
► ಸಿದ್ಧಾಪುರ: ಮಗನ ಹುಟ್ಟುಹಬ್ಬಕ್ಕೆ ಬೆಂಗಳೂರಿನಿಂದ ಬಂದ ವ್ಯಕ್ತಿಗೆ ಸಿಡಿಲು ಬಡಿದು ಸಾವು – https://kundapraa.com/?p=72202 .















