ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆಧುನಿಕ ಜೀವನ ಶೈಲಿಯ ನಡುವೆ ಆರೋಗ್ಯವಂತರಾಗಿ ಬದುಕುವುದು ದೊಡ್ಡ ಸವಾಲು. ಮನುಷ್ಯ ಜೀವನದ ಎಲ್ಲಾ ಸವಾಲುಗಳನ್ನು ಎದುರಿಸುವ ಜಾಣ್ಮೆಯನ್ನು ಕಲಿಯುವುದು ಮುಖ್ಯ ಎಂದು ನಿಮ್ಹಾನ್ಸ್ ಮನೋವೈದ್ಯಕೀಯ ವಿಭಾಗದ ನಿವೃತ್ತ ಉಪನ್ಯಾಸಕ, ಪದ್ಮಶ್ರೀ ಡಾ. ಸಿ.ಆರ್. ಚಂದ್ರಶೇಖರ್ ಹೇಳಿದರು.
ಅವರು ಸೋಮವಾರ ಇಲ್ಲಿನ ಭಂಡಾರ್‌ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಒತ್ತಡ ರಹಿತ ಜೀವನ ವಿಷಯವಾಗಿ ಮಾತನಾಡಿದರು.
ಯಾರಿಗೆ ಹೃದಯ ಕೊಡೋಣ ಅಂತ ಯೋಚಿಸುವ 25 ವರ್ಷ ವಯಸ್ಸಿನವರಿಗೆ ಹೆಚ್ಚು ಹೃದಯಾಘಾತ ಆಗುತ್ತಿರುವುದು ಗಂಭೀರ ಸಂಗತಿ. ಭಾರತವು ಸಕ್ಕರೆ ಕಾಯಿಲೆಯ ರಾಜಧಾನಿಯಾಗಿದೆ. ಸರಿಯಾದ ಆಹಾರ ಅಭ್ಯಾಸಗಳು, ನಿಯಮಿತ ವ್ಯಾಯಾಮ ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ ಎಂದರು.
ಭಂಡರ್‌ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯ ಶಾಂತಾರಾಮ ಪ್ರಭು ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಿಎ ಡಾ. ನಾಗರಾಜ ಆಚಾರ್ಯ ಯಶಸ್ವಿ ಜೀವನದ ಸೂತ್ರಗಳು ವಿಷಯದ ಬಗ್ಗೆ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಮಹಾಲಿಂಗ ಆಚಾರ್, ವಿಶ್ವಸ್ಥ ಮಂಡಳಿ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಸದಾನಂದ ಚಾತ್ರ, ರಾಜೇಂದ್ರ ತೋಳಾರ್, ಯು.ಎಸ್. ಶೆಣೈ, ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಜಿ.ಎಂ. ಗೊಂಡ ಉಪಸ್ಥಿತರಿದ್ದರು. ಈ ವೇಳೆ ಡಾ. ಸಿ.ಆರ್. ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಸ್ವಾಗತಿಸಿದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಸುಮಲತಾ ಸುರೇಶ್, ರೇಡಿಯೋ ಕುಂದಾಪುರ ಸಂಚಾಲಕಿ ಜ್ಯೋತಿ ಸಾಲಿಗ್ರಾಮ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕ ಸುಖಾನಂದ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ಉಪನ್ಯಾಸಕಿ ರಾಜೇಶ್ವರಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.