ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಹುಮಾನ ವಿತರಣಾ ಸಮಾರಂಭ ಇತ್ತಿಚಿಗೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ. ಶಾಂತಾರಾಮ ಪ್ರಭು ಅವರು ಹಿತೈನುಡಿಗಳನ್ನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಡಾ. ರೇಖಾ ವಿ ಬನ್ನಾಡಿ ಅವರು ಸಾಧಕ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ವೃಂದವನ್ನು ಕುರಿತು ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು ಹಾಗೂ ರಾಜೇಂದ್ರ ತೋಳಾರ್ ಇವರು ಸಾಧಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ದತ್ತಿನಿಧಿ ಬಹುಮಾನ ನೀಡಿದರು.
ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಯಾದ ಪ್ರೊ. ಸತ್ಯನಾರಾಯಣ ಹತ್ವಾರ್, ಐಕ್ಯೂಎಸಿ ಸಂಯೋಜಕರಾದ ಡಾ. ವಿಜಯ್ ಕುಮಾರ್ ಕೆ. ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
2022-23 ನೇ ಸಾಲಿನ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಪದವಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆದ ಕ್ರೀಡೆ, ಕರಾಟೆ ಇನ್ನಿತರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಮತ್ತು ಅಂತರ್ ಕಾಲೇಜು ಮಟ್ಟದ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎಂ. ಗೊಂಡ ವಂದಿಸಿದರು. ತೃತೀಯ ಬಿಎ ವಿದ್ಯಾರ್ಥಿನಿ ಮಿಥುನಾ ಪ್ರಭು ಕಾರ್ಯಕ್ರಮ ನಿರೂಪಿಸಿದರು.