ಕುಂದಾಪುರ: ಪ್ರತಿಯೊಬ್ಬರಿಗೂ ಮಾತೃಭಾಷೆ ಮುಖ್ಯವಾಗಿರುತ್ತದೆ. ನಮ್ಮ ಭಾಷೆಯ ಮೇಲೆ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆಯನ್ನು ಬೆಳೆಸುವುದರೊಂದಿಗೆ ಬೇರೆ ಭಾಷೆಗೂ ಪ್ರಾಮುಖ್ಯತೆಯನ್ನು ನೀಡಬೇಕಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಹೇಳಿದರು.
ಅವರು ಕನ್ನಡ ವೇದಿಕೆ ಕುಂದಾಪುರ, ಕುಂದಾಪುರ ತಾಲೂಕು ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘ, ಬಕುಳ ಸಾಹಿತ್ಯ ವೇದಿಕೆ, ಸರಕಾರಿ ಪ.ಪೂ.ಕಾಲೇಜು ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರದ ಸರಕಾರಿ ಪ.ಪೂ.ಕಾಲೇಜಿನ ಲಕ್ಷ್ಮಿ ನರಸಿಂಹ ಕಲಾಮಂದಿರದಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ಜೊತೆ ಕನ್ನಡ ಮಾಸಾಚರಣೆಯ ಪ್ರಯುಕ್ತ ನಿತ್ಯ ಸತ್ಯ ಕನ್ನಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿಜ್ಞಾನಿ ಡಾ|ದಿನೇಶ್ ಆಶಯ ಭಾಷಣ ಮಾಡಿ ಭಾಷೆ ಎನ್ನುವುದು ಅನುಭವಿಸುವಂತಾಗಬೇಕು. ಪ್ರತಿಯೊಬ್ಬನು ಭಾಷೆಯ ಬಗ್ಗೆ ಅಭಿಮಾನವನ್ನು ಬೆಳೆಸಿಕೊಂಡು ಅದು ಬದುಕಿನ ಒಂದು ಭಾಗವಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ತಾಲೂಕು ಪ್ರೌಢಶಾಲಾ ಮುಖ್ಯೋಪಾಯರ ಸಂಘದ ಅಧ್ಯಕ್ಷ ದಿನಕರ ಆರ್.ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಕುಂದಾಪುರ ಸರಕಾರಿ ಪ.ಪೂ.ಕಾಲೇಜಿನ ಪ್ರಾಂಶುಪಾಲ ಸುಬ್ರಹ್ಮಣ್ಯ ಜೋಷಿ ಸ್ವಾಗತಿಸಿದರು. ಕುಂದಾಪುರ ಕನ್ನಡ ವೇದಿಕೆಯ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.