ಕುಂದಾಪ್ರ ಡಾಟ್ ಕಾಂ ಲೇಖನ
ಯೋಗದಲ್ಲಿ ಹೇಳಲಾಗಿರುವ ಭಂಗಿಗಳು, ಉಸಿರಾಟ ಪ್ರಕ್ರಿಯೆ, ವ್ಯಾಯಾಮವು ನಮ್ಮ ದೇಹಕ್ಕೆ ಅಗತ್ಯವಾದ ಆರೋಗ್ಯಕರ ಅಂಶಗಳ ತರಲು ಸಹಕಾರಿಯಾಗಿವೆ. ನೀವು ನಿರಂತರ ಯೋಗಭ್ಯಾಸದಿಂದಾಗಿ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಬಹುದು, ಕೊಬ್ಬು ಕರಗಿಸಬಹುದು, ಇಡೀ ದೇಹದ ಆರೋಗ್ಯ ಕಾಪಾಡಿಕೊಳ್ಳಬಹುದು.
ಆದ್ರೆ ಯೋಗದಿಂದಾಗಿ ನಿಮ್ಮ ಕೂದಲು ಬೆಳವಣಿಗೆಯ ಮೇಲೆಯೂ ಅದರ ಪ್ರಭಾವ ಉಂಟುಮಾಡಬಹುದು ಎಂಬುದು ನಿಮಗೆ ತಿಳಿದಿದ್ಯಾ? ಹೌದು ಯೋಗದಿಂದಾಗಿ ತಲೆಕೂದಲು ಉದುರುವುದು ಹಾಗೂ ಕೂದಲು ಬೆಳವಣಿಗೆಗೆ ಪೂರಕವಾಗಿದೆ ಎಂಬುದು ದೃಢವಾಗಿದೆ. ಹಾಗಾದ್ರೆ ಕೂದಲಿನ ಆರೋಗ್ಯಕ್ಕೆ ಯಾವ ಯೋಗದ ಭಂಗಿಕ ಸಹಕಾರಿಯಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಉಷ್ಟ್ರಾಸನ:
ಉಷ್ಟ್ರಾಸನವು ನೆತ್ತಿಯ ಕಡೆಗೆ ರಕ್ತದ ಹರಿವನ್ನು ಪ್ರೇರೇಪಿಸುತ್ತದೆ. ಇದರಿಂದಾಗಿ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದಲ್ಲದೆ ಇದು ಥೈರಾಯ್ಡ್ ಗ್ರಂಥಿಯ ಅಸಹಜತೆಗಳನ್ನು ಸಮತೋಲನಗೊಳಿಸುತ್ತದೆ. ಈ ಥೈರಾಯ್ಸ್ ಗ್ರಂಥಿಯ ಅಸಹಜ ಪ್ರಭಾವವು ಕೂದಲು ಉದುರುವಿಕೆಗೆ ಕಾರಣವಾಗಬಹುದು. ನೆತ್ತಿಯ ಮೇಲೆ ರಕ್ತ ಪರಿಚಲನೆ ಹೆಚ್ಚಾಗುವುದರಿಂದ, ಉಷ್ಟ್ರಾಸನವು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ಸಹ ತಡೆಯುತ್ತದೆ ಎಂದು ತಿಳಿದುಬಂದಿದೆ.
ಪಾದಹಸ್ತಾಸನ:
ಈ ಆಸನದಲ್ಲಿ ನಿಮ್ಮ ತಲೆಯನ್ನು ನೀವು ನೇರವಾಗಿ ನೆಲದ ಕಡೆ ಬಗ್ಗಿಸುತ್ತೀರಿ ಇದರಿಂದಾಗಿ ತಲೆ ಹೃದಯಕ್ಕಿಂತಲೂ ಕೆಳಗೆ ಬರುವುದರಿಂದಾಗಿ ರಕ್ತ ಪರಿಚಲನೆ ವೇಗವಾಗಿ ನೆತ್ತಿಯ ಕಡೆಗೆ ಉಂಟಾಗುತ್ತದೆ. ಈ ಭಂಗಿಯು ನಿಮ್ಮ ಕೂದಲಿನ ಕೋಶಗಳಿಗೆ ಆಮ್ಲಜನಕವನ್ನು ಒದಗಿಸುತ್ತದೆ ಮತ್ತು ಅವುಗಳನ್ನು ಶಕ್ತಿಯುತಗೊಳಿಸುತ್ತದೆ. ಇದು ಕೂದಲು ಉದುರುವಿಕೆಗೆ ಪ್ರಮುಖ ಕಾರಣಗಳಲ್ಲಿ ಒಂದಾದ ಒತ್ತಡವನ್ನು ನಿವಾರಿಸುತ್ತದೆ. ಇದು ಕೂದಲಿನ ಕಿರುಕೋಶಗಳ ಆರೋಗ್ಯಕ್ಕೆ ಉತ್ತಮ.
ಹಲಾಸನ:
ಹಲಾಸನದಲ್ಲಿ ನೀವು ನೆಲದ ಮೇಲೆ ಮಲಗಿ ನಿಮ್ಮ ಇಡೀ ದೇಹವನ್ನು ತಲೆಯ ಹಿಂಬದಿಗೆ ಮುಟ್ಟಿಸುತ್ತೀರಿ. ಅಂದರೆ ನಿಮ ಮೊಣಕಾಲು ನಿಮ್ಮ ಹಣೆಯ ನೇರಕ್ಕೆ ಬರುತ್ತದೆ. ಹೀಗೆ ಮಾಡುವುದರಿಂದ ದೇಹದ ವಿವಿಧ ಭಾಗಗಳಿಗೆ ರಕ್ತ ಪರಿಚಲನೆಯಾಗಲಿದೆ. ನಿತ್ಯವೂ ಈ ಆಸನಗಳ ಮಾಡುವುದು ನೇರವಾಗಿ ನಿಮ್ಮ ತಲೆಯ ಭಾಗಕ್ಕೆ ರಕ್ತ ಪರಿಚಲನೆ ಹೆಚ್ಚಲು ಕಾರಣವಾಗುತ್ತದೆ.
ಇದಿಷ್ಟೇ ಅಲ್ಲ ಯೋಗದ ಹಲವು ಭಂಗಿಗಳು, ಆಸನಗಳು ಕೂದಲು ಉದುರುವಿಕೆ ತಡೆಯುವಲ್ಲಿ ಪರೋಕ್ಷವಾಗಿ ಕೊಡುಗೆ ನೀಡುತ್ತವೆಯಂತೆ. ನಿತ್ಯ ಯೋಗ ಮಾಡುವುದು ನಿಮ್ಮ ಮನಸ್ಸಿಗೆ ಮುದ ನೀಡುತ್ತದೆ ಜೊತೆಗೆ ಒತ್ತಡ ನಿವಾರಣೆಗೆ ಸಹಕಾರಿಯಾಗಲಿದೆ. ನೀವು ಒತ್ತಡ ನಿವಾರಣೆಗೆ ಒತ್ತು ನೀಡಿದಂತೆ ಇದು ಕೂದಲು ಉದುರುವಿಕೆಯ ಸಮಸ್ಯೆಗೆ ಪರಿಹಾರ ಕಂಡುಕೊಂಡಂತೆ.
ಯೋಗವು ಸಾವಧಾನತೆ ಮತ್ತು ವಿಶ್ರಾಂತಿಯನ್ನು ಉತ್ತೇಜಿಸುತ್ತದೆ, ಇದು ಹಾರ್ಮೋನ್ ಸಮತೋಲನವನ್ನು ಧನಾತ್ಮಕವಾಗಿ ಪರಿಣಾಮ ಬೀರುತ್ತದೆ. ಹಾರ್ಮೋನುಗಳ ಏರಿಳಿತಗಳು ಕೂದಲಿನ ಆರೋಗ್ಯಕ್ಕೆ ಸಂಬಂಧಿಸಿವೆ ಮತ್ತು ಹಾರ್ಮೋನ್ ಸಮತೋಲನವನ್ನು ಕಾಪಾಡಿಕೊಳ್ಳುವುದು ಆರೋಗ್ಯಕರ ಕೂದಲಿಗೆ ಕೊಡುಗೆ ನೀಡಬಹುದು. ಮನಸ್ಸಿಗೆ ಉಲ್ಲಾಸಭರಿತ ದಿನ ಕಳೆಯಬೇಕಾದರೆ ನಿತ್ಯ ಯೋಗ ಮಾಡಬೇಕು. ಜೊತೆಗೆ ಇದರಿಂದ ನಿಮ್ಮ ಮೇಲೆ ಹಿಡಿತ ಸಾಧಿಸಬಹುದು. ಅಲ್ಲದೆ ಫಿಟ್ ಆಗಿರಲು ಸಹ ಯೋಗ ಸಹಾಯ ಮಾಡಲಿದೆ. ಇದರಿಂದಾಗಿ ಪರೋಕ್ಷವಾಗಿ ನೀವು ಕೂದಲು ಉದುರುವಿಕೆಯಿಂದ ದೂರಾಗುತ್ತಿರುತ್ತೀರಿ.