ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇತ್ತೀಚೆಗೆ ತೀವ್ರ ವಿವಾದಕ್ಕೊಳಗಾದ ಕುಂದಾಪುರ ಪುರಸಭಾ ವ್ಯಾಪ್ತಿಯ ಹೋಟೆಲ್ ಪಾರಿಜಾತ ಸಮೀಪದ ಶಂಕರ ಶೇಟ್ ಟವರ್ಸ್‌ನ ಎದುರುಗಡೆಯಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಕಬ್ಬಿಣದ ಆವರಣ ಗೋಡೆಯನ್ನು ತೆರವುಗೊಳಿಸುವಂತೆ ಸೂಚಿಸಿ ಕುಂದಾಪುರ ಪುರಸಭಾ ಕಾರ್ಯಾಲಯವು ಕಟ್ಟಡದ ಮುಖ್ಯಸ್ಥರಿಗೆ ಜೂನ್ 14ರಂದು ನೋಟೀಸು ಜಾರಿಗೊಳಿಸಿರುವ ಕುರಿತು ತಿಳಿದು ಬಂದಿದೆ.
ನೋಟೀಸ್ ನಲ್ಲಿ “ಪುರಸಭಾ ವ್ಯಾಪ್ತಿಯ ಶಂಕರ ಶೇಟ್ ಟವರ್ಸ್‌ನಲ್ಲಿ ಅನಧಿಕೃತ ಆವರಣ ಗೋಡೆ ರಚಿಸುತ್ತಿರುವ ಕುರಿತು ತಮ್ಮ ಕಚೇರಿಗೆ ದೂರು ಸಲ್ಲಿಕೆಯಾಗಿದ್ದು ಈ ಬಗ್ಗೆ ಪುರಸಭೆಯ ಕಿರಿಯ ಅಭಿಯಂತರರು ಪರಿಶೀಲಿಸಿ ವರದಿ ನೀಡಿದ್ದು ಆ ವರದಿಯ ಪ್ರಕಾರ ಸದ್ರಿ ಸ್ಥಳದಲ್ಲಿ ಅನಧಿಕೃತವಾಗಿ ಪರವಾನಿಗೆ ಪಡೆಯದೇ ಆವರಣಗೋಡೆ ನಿರ್ಮಿಸಿರುವುದು ಕಂಡು ಬಂದಿದ್ದು ಆ ಕಾರಣಕ್ಕಾಗಿ ಸದ್ರಿ ಆವರಣಗೋಡೆಯನ್ನು ಈ ನೋಟಿಸು ತಲುಪಿದ ಏಳು ದಿನಗಳೊಳಗೆ ತೆರವುಗೊಳಿಸಬೇಕು” ಎಂದು ಸೂಚಿಸಲಾಗಿದೆ.
ಸದ್ರಿ ಶಂಕರ್ ಶೇಟ್ ಟವರ್ಸ್‌ನ ಓನರ್ಸ್ ಅಸೋಸಿಯೇಷನ್ ನಿರ್ಮಿಸಿತ್ತು ಎನ್ನಲಾದ ಈ ಅನಧಿಕೃತ ಆವರಣಗೋಡೆಯಿಂದ ನಮ್ಮ ಅಂಗಡಿಯ ವ್ಯವಹಾರಕ್ಕೆ ತೊಂದರೆಯಾಗುತ್ತಿದ್ದು, ನಮ್ಮ ಅಂಗಡಿಗೆ ಬರುವ ಗ್ರಾಹಕರು ಸುತ್ತುಹಾಕಿ ಬರಬೇಕಾದ ಪ್ರಮೇಯ ಉಂಟಾಗಿದ್ದರಿಂದ ಆ ಗ್ರಾಹಕರು ಬೇರೆ ಅಂಗಡಿಗಳತ್ತ ಹೋಗುತ್ತಿದ್ದಾರೆ. ಅದರಿಂದ ನಮಗೆ ಆರ್ಥಿಕ ನಷ್ಟ ಉಂಟಾಗಿದೆ. ಆದ ಕಾರಣ ನಮ್ಮ ಅಂಗಡಿಯ ಎದುರಿನ ಅನಧಿಕೃತ ಆವರಣ ಗೋಡೆ ತೆರವುಗೊಳಿಸಿ ಕೊಡುವಂತೆ ವಿನಂತಿಸಿ ನೆಲ ಅಂತಸ್ಥಿನ ಅಂಗಡಿ ಕೋಣೆಯ ಮಾಲಕ ಸಹೋದರರಾದ ಗೌತಮ್ ಮತ್ತು ಶೈಲೇಶ್ ಅವರು ಪುರಸಭಾ ಮುಖ್ಯಾಧಿಕಾರಿಗಳಿಗೆ, ಕುಂದಾಪುರ ಸಹಾಯಕ ಉಪವಿಭಾಗಾಧಿಕಾರಿಗಳಿಗೆ, ಕುಂದಾಪುರ ಶಾಸಕರಿಗೆ ಹಾಗೂ ಉಡುಪಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ಈ ಹಿಂದೆ ಈ ಅನಧಿಕೃತ ಆವರಣ ಗೋಡೆಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ ಮತ್ತು ದೇವಕಿ ಸಣ್ಣಯ್ಯ ರವರು ಪತ್ರಿಕಾ ಹೇಳಿಕೆ ನೀಡಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.