ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯಾಂತ್ರೀಕೃತ ಕೃಷಿಯೇ ಹೆಚ್ಚಾಗಿರುವುದರ ನಡುವೆಯೂ ಮಕ್ಕಳಿಗೆ ಸಾಂಪ್ರದಾಯಿಕ ಕೃಷಿಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಶ್ಲಾಘನೀಯ. ಭತ್ತದ ಕೃಷಿಯೊಂದಿಗೆ ಕೃಷಿ ಸಂಸ್ಕೃತಿಯನ್ನು ತಿಳಿಸಿಕೊಡುವ ಕಾರ್‍ಯ ಸ್ಕೌಟ್ -ಗೈಡ್ಸ್ ಹಾಗೂ ವಿವಿಧ ಸಂಘಟನೆಗಳಿಂದ ಆಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಅವರು ಶುಕ್ರವಾರ ಇಲ್ಲಿನ ಮಂಗಲಪಾಂಡೆ ರಸ್ತೆ ವಾರ್ಡ್‌ನ ಕೋಟ್ಯಾನ್ ಕುಟುಂಬಸ್ಥರ ಗದ್ದೆಯಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕುಂದಾಪುರ ನೇತೃತ್ವದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ವಿದ್ಯಾರ್ಥಿಗಳಿಗೆ ಆಯೋಜಿಸಿದ ‘ಕೃಷಿಯ ಕಡೆ ನಮ್ಮ ನಡೆʼ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸ್ಕೌಟ್ ಹಾಗೂ ಗೈಡ್ಸ್ ಕುಂದಾಪುರದ ಅಧ್ಯಕ್ಷೆ ಗುಣರತ್ನ ಅವರು, ಭಾರತ್ ಸ್ಕೌಟ್ ಮತ್ತು ಗೈಡ್ಸ್ ವತಿಯಿಂದ ವಿದ್ಯಾರ್ಥಿಗಳಿಗೆ ಕಳೆದ 10 ವರ್ಷಗಳಿಂದ ಕೃಷಿಯ ಕಡೆ ನಮ್ಮ ನಡೆ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದೆ. ಮಕ್ಕಳಿಗೆ ಕೃಷಿಯ ಪ್ರಾಯೋಗಿಕ ಅರಿವು ನೀಡುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.
ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಸುಮನಾ ಶೇಖರ್, ಸಂಪನ್ಮೂಲ ವ್ಯಕ್ತಿ ಸುನೀತಾ ಬಾಂಜ್, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ರೇಖಾ ಕೆ.ಯು., ಸಮಾಜ ಸೇವಕ ಸತೀಶ್ ಮತ್ತು ಸುಮಿತ್ರಾ ಕೋಟ್ಯಾನ್, ಸಂಸ್ಥೆಯ ಉಪಾಧ್ಯಕ್ಷ ಕೆ.ಆರ್ ನಾಯಕ್, ಕೋಟ್ಯಾನ್ ಕುಟುಂಬಸ್ಥರು, ಸ್ಥಳೀಯ ಶಾಲೇಯ ಶಿಕ್ಷಕರು ಉಪಸ್ಥಿತರಿದ್ದರು.
ಹದಗೊಳಿಸಿದ ಗದ್ದೆಗಿಳಿದ ವಿದ್ಯಾರ್ಥಿಗಳು ಸಾಂಪ್ರಾದಾಯಿಕ ಶೈಲಿಯಲ್ಲಿ ನೇಜಿಯನ್ನು ನೆಟ್ಟು ಖುಷಿ ಪಟ್ಟರು. ಕುಂದಾಪುರರ ವಲಯದ 7 ಶಾಲೆಗಳ 240 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಪೂರ್ಣವಾಗಿ ಮರೆಯಾಗುತ್ತಿರುವ ಸಾಂಪ್ರಾದಾಯಿಕ ನಾಟಿ ಪದ್ದತಿಯ ಅನುಭವನ್ನು ಸ್ವತಃ ಮಕ್ಕಳು ಪಡೆದುಕೊಂಡರು.
ಭಾರತ್ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಕಾರ್ಯದರ್ಶಿ ಆನಂದ ಅಡಿಗ ಪ್ರಸ್ತಾವಿಸಿದರು. ಶಿಕ್ಷಕಿ ತಾರದೇವಿ ಸ್ವಾಗತಿಸಿ, ಸಂಸ್ಥೆಯ ಖಜಾಂಚಿ ವೀರೇಂದ್ರ ವಂದಿಸಿದರು. ತೆಕ್ಕಟ್ಟೆ ಕುವೆಂಪು ಶತಮಾನೋತ್ಸವ ಶಾಲೆಯ ಸ್ಕೌಟ್ ಶಿಕ್ಷಕ ಸದಾನಂದ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.