ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಿರಂತರವಾಗಿ ದಿನಗಳಿಂದ ಸುರಿಯುತ್ತಿರುವ ಪುನರ್ವಸು ಮಳೆಗೆ ಕರಾವಳಿಯ ಜನಜೀವನ ತಲ್ಲಣಿಸಿದೆ. ಜಿಲ್ಲೆಯ ಕೋಟ, ಬನ್ನಾಡಿ, ಬಸ್ರೂರು ಕಂಡ್ಲೂರು, ನಾವುಂದ ಸೇರಿದಂತೆ ವಿವಿಧ ಭಾಗಗಳಲ್ಲಿ ಗಾಳಿ ಸಹಿತ ಮಳೆ, ನೆರೆಯಬ್ಬರಕ್ಕೆ ಕೃಷಿ ಹಾಗೂ ಆಸ್ತಿಪಾಸ್ತಿ ಹಾನಿ ಸಂಭವಿಸಿದೆ.
ಕೋಟ ಸಮೀಪದ ಬನ್ನಾಡಿ, ಗಿಳಿಯಾರು, ತೆಕ್ಕಟ್ಟೆ ಪ್ರದೇಶ ಜಲಾವೃತವಾಗಿದೆ. ಕೋಟ – ಸಾಯಿಬ್ರಕಟ್ಟೆ ಸಂಪರ್ಕ ರಸ್ತೆ ಕಡಿತವಾಗಿದೆ. ತೆಕ್ಕಟೆ, ಕೋಟೇಶ್ವರ ಭಾಗದಲ್ಲಿಯೂ ನೆರೆಯಬ್ಬರ ಹೆಚ್ಚಿದೆ. ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಳದ ಹೊರಪೌಳಿಗೂ ನೆರೆ ನೀರು ನುಗ್ಗಿದೆ. ನಾವುಂದದ ಸಾಲ್ಬುಡ, ಕಂಡ್ಲೂರು ಭಾಗದಲ್ಲಿ ಸೌಪರ್ಣಾಕಾ ಹಾಗೂ ವರಾಹಿ ನದಿ ತುಂಬಿ ಹರಿದ ಪರಿಣಾಮ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಮಳೆಯಿಂದಾಗಿ ನೂರಾರು ಎಕರೆ ಕೃಷಿಭೂಮಿ, ಮನೆಗಳು ಜಲಾವೃತಗೊಂಡಿದ್ದು, ಅಲ್ಲಿನ ವಾಸಿಗಳು ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಹಾಲಾಡಿ ಸಮೀಪ ಸೇತುವೆ ಸಂಪರ್ಕ ಕಡಿತಗೊಂಡಿದ್ದರೇ, ಕೆಲ ಗ್ರಾಮಗಳಲ್ಲಿ ರಸ್ತೆಯ ಮೇಲೆಯೇ ನೀರು ರಭಸದಿಂದ ಹರಿದು ರಸ್ತೆ ಸಂಪರ್ಕ ಕೆಲ ಕಾಲ ಕಡಿತಗೊಂಡಿದೆ. ಅಲ್ಲಲ್ಲಿ ಮರ ಹಾಗೂ ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಕೆಲವೆಡೆ ಮನೆ ಕುಸಿತದ ಬಗ್ಗೆ ವರದಿಯಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಮಳೆಯು ಎರಡು ದಿನಗಳಿಂದ ಬಿಡೆದೇ ಸುರಿಯುತ್ತಿದ್ದು, ರೇಡ್ ಅಲರ್ಟ್ ಘೋಷಿಸಲಾಗಿದೆ. ಜುಲೈ 20ರ ತನಕವೂ ಅಧಿಕ ಮಳೆಯಾಗುವ ಬಗ್ಗೆ ಹವಮಾನ ಇಲಾಖೆ ಎಚ್ಚರಿಸಿದೆ. ಇಂದು ಶಾಲೆಗಳೂ ರಜೆ ನೀಡಲಾಗಿತ್ತು. ವಾರಾಹಿ, ಸೌಪರ್ಣಿಕಾ ಪಂಚಗಂಗಾ ನದಿಗಳು ತುಂಬಿ ಹರಿಯುತ್ತಿದೆ.
ಬೈಂದೂರು ತಾಲೂಕಿನ ಸಾಲ್ಬುಡದಲ್ಲಿ ಒಂದು ವಾರದ ಹಿಂದಷ್ಟೇ ನೆರೆಯಿಂದ ಜನರು ಚೇತರಿಸಿಕೊಂಡಿದ್ದು, ಈಗ ಮತ್ತೊಮ್ಮೆ ನೆರೆಯಾವರಿಸಿದೆ. ಜನರು ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಶಿರೂರು ಬೈಂದೂರು ನಡುವಿನ ಒತ್ತನಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತದ ಭೀತಿ ಇದ್ದು, ಹೆದ್ದಾರಿ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.
ನೆರೆಪೀಡಿತ ಪ್ರದೇಶಗಳಲ್ಲಿ ಅಗ್ನಿಶಾಮಕ ದಳದ ತಂಡ, ಪೊಲೀಸರು ಹಾಗೂ ಸ್ಥಳೀಯರು ಜನರನ್ನು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯಲು ನೆರವಾದರು. ವಿವಿಧೆಡೆ ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಸಿಇಓ ಪ್ರತೀಕ್ ಭಾಯಲ್, ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್., ತಹಶೀಲ್ದಾರ್ ಶೋಭಾಲಕ್ಷ್ಮೀ, ಪ್ರದೀಪ್ ಹಾಗೂ ಇನ್ನಿತರರು ಭೇಟಿ ನೀಡಿ ಪರಿಶೀಲಿಸಿದರು.
► ಕುಂದಾಪುರ: ಕೌಟುಂಬಿಕ ಕಲಹ. ಪತ್ನಿ ಎದುರೇ ಹೊಳೆಗೆ ಹಾರಿದ ಪತಿ – https://kundapraa.com/?p=74408 .