ಬೈಂದೂರು ಚಂದ್ರಶೇಖರ ನಾವಡ | ಕುಂದಾಪ್ರ ಡಾಟ್ ಕಾಂ.
ಯುದ್ಧ ಎನ್ನುವ ಶಬ್ಧವೇ ಭಯ ಹುಟ್ಟಿಸುವಂತಹದ್ದು. ಗಡಿಯಿಂದ ಸಾವಿರಾರು ಕಿಮೀ ದೂರವಿರುವ ಕನ್ನಡಿಗರಿಗೆ ಸೈನ್ಯ ಸಂಘರ್ಷದ ನೇರ ಅನುಭವ ಇಲ್ಲವಾದದ್ದರಿಂದ ಯುದ್ಧದ ಭೀಕರ ಪರಿಣಾಮದ ಕಲ್ಪನೆ ಅನೂಹ್ಯ. ಆದರೂ ಮಾಧ್ಯಮಗಳ ಮೂಲಕ ವರ್ತಮಾನದಲ್ಲಿ ಕಾಣುತ್ತಿರುವ ಪ್ಯಾಲೇಸ್ತೀನಿನ ಗಾಜಾದಲ್ಲಿನ ರಕ್ತಪಾತ ನಮ್ಮ ಮನ ಕಲಕುತ್ತದೆ. ಒಂದೆರಡು ವರ್ಷಗಳ ಹಿಂದೆ ಯುದ್ಧಭೀತಿಯಲ್ಲಿ ದೇಶ ಬಿಟ್ಟು ಓಡಲು ವಿಮಾನದ ರೆಕೆ, ಚಕ್ರಕ್ಕೆ ಜೋತು ಬಿದ್ದ ಭಯವಿಹ್ವಲ ಅಫಘಾನೀಯರ ದಾರುಣ ದೃಶ್ಯ ನಮ್ಮ ಕಣ್ಣ ಮುಂದೆ ಬರುತ್ತದೆ. 1971ರ ನಂತರ ಶಾಂತಿ ಸಮೃದ್ಧಿಯಿಂದ ಬದುಕುತ್ತಿದ್ದ ಜಮ್ಮು ಕಾಶ್ಮೀರದ ಜನತೆ 1999ರಲ್ಲಿ ಕಾರ್ಗಿಲ್‌ನಲ್ಲಿ ಅಪರೇಶನ್ ವಿಜಯ ಪ್ರಾರಂಭವಾದಾಗ ಇಂತಹದೇ ನೋವನ್ನು ಎದುರಿಸಿದ್ದರು.
1,999ರ ಫೆಬ್ರವರಿಯಲ್ಲಷ್ಟೇ ಪಂಜಾಬಿನ ಫಿರೋಜ್‌ಪುರ್‌ನಲ್ಲಿದ್ದ 4ನೇಸಿಖ್ ಲೈಟ್ ಇನ್ಫೆಂಟ್ರಿಯಿಂದ ಸ್ಥಾನಾಂತರಣಗೊಂಡು ಜಮ್ಮುವಿನ ಅಖ್ನೂರ್‌ನಲ್ಲಿ ಬೇಸ್ ಹೊಂದಿದ್ದ 19ನೇ ಮಹಾರ್ ರೆಜಿಮೆಂಟಿಗೆ ನಾನು ಜಾಯಿನ್ ಆಗಿದ್ದೆ. ಎಪ್ರಿಲ್ 1999ರ ಹಾಗೆ ನಾನಿದ್ದ 19ನೇ ಮಹಾರ್ ರೆಜಿಮೆಂಟಿಗೆ ಪಲ್ಲನವಾಲಾ ಸೆಕ್ಟರ್ ವ್ಯಾಪ್ತಿಯಲ್ಲಿ ಬರುವ ಪ್ರದೇಶದ ನಿಯಂತ್ರಣರೇಖೆಯ (ಲೈನ್ ಆಫ್ ಕಂಟ್ರೋಲ್) ಕಾವಲಿನ ಮಹತ್ವದ ಹೊಣೆ ದೊರಕಿತ್ತು.
1,999ರ ಮೇ ತಿಂಗಳ ಮೊದಲ ವಾರದಲ್ಲಿ ಕಾರ್ಗಿಲ್‌ನ ಮಾನವರಹಿತ ಪ್ರದೇಶದಲ್ಲಿ (ನೋ ಮ್ಯಾನ್ ಲೇಂಡ್) ನಿಯಮಿತ ಪಟ್ರೋಲಿಂಗ್ ಮತ್ತು ಸರ್ಚ್ ಅಪರೇಶನ್‌ಗಾಗಿ ಹೋದ ಕ್ಯಾಪ್ಟನ್ ಸೌರಭ್ ಕಾಲಿಯಾ ನೇತ್ರತ್ವದ ಐವರು ಯೋಧರ ತಂಡ ನಾಪತ್ತೆಯಾಗಿತ್ತು. ಈ ತಂಡದ ಹುಡುಕಾಟಕ್ಕಾಗಿ ಇನ್ನಷ್ಟು ಟ್ರೂಪ್ಸ್ ಕಳುಹಿಸಲಾಯಿತು. ವಾಸ್ತವದಲ್ಲಿ ಕಾರ್ಗಿಲ್‌ನ ಎತ್ತರದ ಸ್ಥಳಗಳಲ್ಲಿ ಅದಾಗಲೇ ಪಾಕಿಸ್ತಾನೀಯರು ಬಂಕರ್‌ಗಳನ್ನು ನಿರ್ಮಿಸಿಕೊಂಡು ಪೊಜಿಶನ್ ತೆಗೆದುಕೊಂಡಿದ್ದರು. ಏರಿಯಾ ಸರ್ಚಿಂಗ್‌ಗೆಂದು ಹೋದ ಕ್ಯಾಪ್ಟನ್ ಸೌರಭ್ ತಂಡವನ್ನು ಸೆರೆಹಿಡಿದು ಚಿತ್ರಹಿಂಸೆ ನೀಡಿ ಕೊಂದಿದ್ದರು. ಈ ಎಲ್ಲಾ ವಿದ್ಯಮಾನಗಳು ಭಾರತಕ್ಕೆ ವಿಳಂಬವಾಗಿ ಅರಿವಾಯಿತು. ಆಗ ಅಕ್ರಮ ದಾಳಿಕೋರರನ್ನು ಹೊರದಬ್ಬಲು ‘ಅಪರೇಷನ್ ವಿಜಯ್’ ಎನ್ನುವ ಸೈನ್ಯ ಕಾರ್ಯಾಚರಣೆ ಪ್ರಾರಂಭವಾಯಿತು.
ಅಪರೇಶನ್ ವಿಜಯದ ಕೇಂದ್ರಬಿಂದು ಕಾರ್ಗಿಲ್ ಆಗಿದ್ದರೂ ಅದರ ಬಿಸಿ ಗಡಿಯಂಚಿನ ಸಮಗ್ರ ಜಮ್ಮು ಕಾಶ್ಮೀರ ನಿವಾಸಿಗಳಿಗೆ ತಟ್ಟಿತು. ಗಡಿದಾಟದೇ ಪಾಕಿಸ್ತಾನೀಯರನ್ನು ಹೊರಹಾಕುವ ಆದೇಶ ಅಂದಿನ ಸರಕಾರ ಸೇನೆಗೆ ನೀಡಿದ್ದರೂ ಎರಡೂ ದೇಶಗಳು ಪರಮಾಣು ಸಂಪನ್ನವಾದದ್ದರಿಂದ ಅದು ಪೂರ್ಣಪ್ರಮಾಣದ ಯುದ್ಧಕ್ಕೆ ಹೊರಳುವ ಎಲ್ಲಾ ಸಾಧ್ಯತೆಗಳು ಇದ್ದಿತ್ತು. ಕಾರ್ಗಿಲ್‌ನಲ್ಲಿ ನಡೆಯುತ್ತಿದ್ದ ಸಂಘರ್ಷ ಗಡಿಯುದ್ದಕ್ಕೂ ಟೆನ್ಷನ್ ಹೆಚ್ಚಿಸಿತು. 1971ರ ಯುದ್ಧದ ನಂತರ ಶಾಂತವಾಗಿದ್ದ ಜಮ್ಮು ಭಾಗದ ಗಡಿಯಂಚಿನ ಜನವಸತಿ, ಕೃಷಿ ಭೂಮಿಯ ಮೇಲೆ ಗ್ರೆನೇಡ್, ಮೋರ್ಟಾರ್, ರಾಕೆಟ್ ಫಾಯರ್ ಬೀಳತೊಡಗಿತು. ಕೃಷಿ ಕೂಲಿಕಾರರು, ವಿದ್ಯಾರ್ಥಿಗಳು ಸಹಿತ ಜನ ಸಾಮಾನ್ಯರ ಬದುಕು ದುಸ್ತರವಾಯಿತು. ಜಾನುವಾರುಗಳ ಜೀವನ ಕೂಡಾ ತಲ್ಲಣಗೊಂಡಿತು. ಹಠಾತ್ತನೆ ನಡೆಯುತ್ತಿದ್ದ ಫಾಯರಿಂಗ್‌ನಿಂದ ಅಸುನೀಗುವ, ವಿಕಲಾಂಗತೆಗೆ ಒಳಗಾಗುತ್ತಿದ್ದ ಮನುಷ್ಯರ, ಪಶು-ಪಕ್ಷಿಗಳ ವೇದನೆ ಅಸದಳ.
ನಾವಿದ್ದ ಪಲ್ಲನವಾಲಾ ಸೆಕ್ಟರಿನ ಕಚ್ರಿಯಾಲ್, ಚಪ್ರಿಯಾಲ್, ಚನ್ನಿ, ಚಕ್ಲಾ, ಹಮೀರ‍್ಪುರ್‌ಗಳಂತಹ ಹಳ್ಳಿಗಳಲ್ಲಿದ್ದ ಆರ್ಥಿಕವಾಗಿ ಬಲಾಢ್ಯ ಕುಟುಂಬಗಳು ದಿನನಿತ್ಯದ ಇಂತಹ ಘಟನೆಗಳಿಂದ ಬೇಸತ್ತು ಸುರಕ್ಷಿತ ತಾಣವನ್ನರಸುತ್ತಾ ಅಖ್ನೂರ್, ಜಮ್ಮುವಿನತ್ತ ವಲಸೆ ಹೋಗಿದ್ದರು. ಪರ್ಯಾಯ ವ್ಯವಸ್ಥೆ ಇಲ್ಲದವರು ಸರ್ಕಾರ ಜೋಡಿಯಾ ಎಂಬಲ್ಲಿ ತೆರೆದ ನಿರಾಶ್ರಿತರ ಶಿಬಿರಕ್ಕೆ ತೆರಳಬೇಕಾಯಿತು. ಈ ಹಳ್ಳಿಗಳು ಕರ್ಫ್ಯೂಗ್ರಸ್ತವಾದಂತೆ, ಪಾಳುಬಿದ್ದಂತೆ ನಿರ್ಜನವಾಗಿ ಕಾಣುತ್ತಿತ್ತು. ಹಳ್ಳಿಯನ್ನು ತೊರೆಯಲೊಪ್ಪದ ವೃದ್ಧರು, ಬಡವರು, ಏನಾಗುತ್ತದೋ ನೋಡಿಯೇ ಬಿಡೋಣ ಎನ್ನುವ ಗಟ್ಟಿ ಮನಸ್ಸಿನ ಕೆಲವು ಯುವಕರು ಮಾತ್ರ ಉಳಿದಿದ್ದರು.
ನಾಗರಿಕರ ಜತೆಯಲ್ಲಿ ಗಡಿಯುದ್ದಕ್ಕೂ ಜೀರೋ ಲೈನಿನಲ್ಲಿ ನಿಯೋಜನಗೊಂಡಿದ್ದ ಬಟಾಲಿಯನ್ನಿನ ಯೋಧರ ದಿನಚರಿಯೂ ಬದಲಾಯಿತು. ದಿನದಲ್ಲೂ ನಡೆಯುತ್ತಿದ್ದ ಫಾಯರಿಂಗ್‌ನಿಂದಾಗಿ ನಮ್ಮ ಚಲನೆಗಳಿಗೆ ಬ್ರೇಕ್ ಬಿದ್ದವು. ಬೆಳಿಗ್ಗೆಯೇ ಪೂರ್ಣ ದಿನಕ್ಕಾಗುವಷ್ಟು ಕಿಚಡಿ ಅಥವಾ ಪೂರಿ ಪಲ್ಯ ನೀಡಲಾಗುತ್ತಿತ್ತು. ಇನ್ನು ರಾತ್ರಿ ಬಂಕರ್‌ಗಳಲ್ಲಿ ಬೂಟು ತೊಟ್ಟು, ಮಗ್ಗುಲಲ್ಲಿ ಹೆಲ್ಮೆಟ್, ಮ್ಯಾಗಜಿನ್ ಲೋಡ್ ಮಾಡಿರುವ ಬಂದೂಕು ಇಟ್ಟುಕೊಂಡೇ ಮಲಗಬೇಕಾದ ಸ್ಥಿತಿ ಇತ್ತು. ರಾತ್ರಿಯಿಡೀ ಆಗಾಗ್ಗೆ ನಡೆಯುತ್ತಿದ್ದ ಲೈಟ್ ಮೆಶೀನ್‌ಗನ್ ಫಾಯರಿಂಗ್ ಯೋಧರಿಗೆ ಶತ್ರು ತನ್ನ ಪೋಸ್ಟ್‌ನಲ್ಲೇ ಇದ್ದಾನೆ ಎನ್ನುವ ಹಾಗೂ ತಮ್ಮೆಡೆಗೆ ಬರುತ್ತಿಲ್ಲದರ ಖಾತರಿ ನೀಡುವಂತಿರುತ್ತಿತ್ತು.
ವೈರಿಗಳ ಪೋಸ್ಟ್ ಕಡೆಯಿಂದ ಫಾಯರಿಂಗ್ ನಿಂತರೆ ಅವರೆಲ್ಲಿ ತಮ್ಮೆಡೆಗೆ ಬರುತ್ತಿರುವರೋ ಎನ್ನುವ ಸಂಶಯ ಕಾಡುವ ಸ್ಥಿತಿ ಇತ್ತು. ಸೆಕ್ಟರ್‌ನ ಎಲ್ಲೋ ನಡೆಯುವ ರೈಡ್‌ಗಳ ಪ್ರತೀಕಾರ ಇನ್ನೆಲ್ಲೋ ತೆಗೆದುಕೊಳ್ಳುವ ಅಪನಂಬಿಕೆಯ ವಾತಾವರಣದಿಂದಾಗಿ ಯೋಧರ ಮಾನಸಿಕ ಶಾಂತಿ ಕಾಣೆಯಾಗಿತ್ತು. ಯಾವ ಸಮಯದಲ್ಲಿ ಏನಾಗುವುದೋ ಎನ್ನುವ ಮಾನಸಿಕ ತಳಮಳ ಕಾಡುತ್ತಿತ್ತು. ಯುದ್ಧಭೀತಿಯಲ್ಲಿ ಸೈನಿಕರ ಜತೆಯಲ್ಲೇ ನಮ್ಮ ಕುಟುಂಬಸ್ಥರೂ ಚಿಂತೆಯಲ್ಲಿಯೇ ಸಮಯ ಕಳೆಯಬೇಕಾಯಿತು. ಅತಿಕ್ರಮಣಕಾರರನ್ನು ಹೊರದಬ್ಬಿಯೇ ಸಿದ್ಧ ಎಂದು ಧೈರ್ಯ ಸಂಯಮದಿಂದ ಹೋರಾಡಿದ ಭಾರತೀಯ ಸೇನೆ ಅಂತಿಮವಾಗಿ ಜಯ ಸಾಧಿಸಿದರು. 26 ಜುಲೈ 1,999 ರಂದು ಅಧಿಕೃತವಾಗಿ ಅಪರೇಶನ್ ವಿಜಯದ ಸಮಾಪ್ತಿ ಘೋಷಿಸಲಾಯಿತು.
ಸಮುದ್ರ ಮಟ್ಟದಿಂದ 15-19 ಸಾವಿರ ಅಡಿ ಎತ್ತರದ ಹವಾಮಾನ ವೈಪರೀತ್ಯದ ರಣಕಣದಲ್ಲಿ ನಡೆದ ಯುದ್ಧದ ವಿಜಯಕ್ಕಾಗಿ 527 ಯೋಧರು ತಮ್ಮ ಪ್ರಾಣದ ಬಲಿ ಕೊಡಬೇಕಾಯಿತು. 1,363 ಸೈನಿಕರು ಶಾಶ್ವತ ವಿಕಲಾಂಗತೆಗೊಳಗಾದರು ಅಥವಾ ಗಾಯಗೊಂಡರು. ಅಸಾಧರಣ ಶೌರ್ಯ ಸಾಹಸಕ್ಕಾಗಿ ಗ್ರೆನೆಡಿಯರ್ ಯೋಗೇಂದ್ರ ಯಾದವ್ ಹಾಗೂ ಮರಣೋತ್ತರವಾಗಿ ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, ಕ್ಯಾಪ್ಟನ್ ವಿಕ್ರಮ ಬಾತ್ರಾ, ರೈಫಲ್‌ಮ್ಯಾನ್ ಸಂಜಯ ಕುಮಾರ್ ಅವರಿಗೆ ಪರಮವೀರ ಚಕ್ರ ನೀಡಿ ಗೌರವಿಸಲಾಯಿತು.
ದೇಶರಕ್ಷಣೆಗಾಗಿ ಸರ್ವೋಚ್ಚ ಬಲಿದಾನ ನೀಡಿದ ಎಲ್ಲಾ ಯೋಧರಿಗೆ ನಮನಗಳು. ನಮ್ಮೆಲ್ಲರ ಸುಂದರ ನಾಳೆಗಾಗಿ ತಮ್ಮ ವರ್ತಮಾನವನ್ನು ತ್ಯಾಗ ಮಾಡಿದ ಅಮರ ಹುತಾತ್ಮರೆಲ್ಲರನ್ನು ಸ್ಮರಿಸೋಣ ಬನ್ನಿ.