ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜನಸಮಾನ್ಯರು ತಮ್ಮ ಕೆಲಸಗಳಿಗಾಗಿ ಕಛೇರಿಗೆ ತೆರಳಿದರೆ ಸರಕಾರಿ ನೌಕರರು ದುಡ್ಡಿನ ಮುಖನೋಡಿ ಕೆಲಸ ಮಾಡಿಕೊಡುವ ಸ್ಥಿತಿ ಇದ್ದು, ಉಡುಪಿ ಜಿಲ್ಲೆಯವರು ಸಾರ್ವಜನಿಕವಾಗಿಯೇ ಭ್ರಷ್ಟಾಚಾರವನ್ನು ಒಪ್ಪಿಕೊಂಡುಬಿಟ್ಟಿದ್ದಾರೆ. ಹಣ ನೀಡಿ ವರ್ಗಾವಣೆಯಾಗುವ ಅಧಿಕಾರಿಗಳಿಂದ ಹಾಗೂ ಜವಾಬ್ದಾರಿ ಮರೆತ ಜನಪ್ರತಿನಿಧಿಗಳಿಂದ ಮತ್ತೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಅನ್ಯಾಯವಾಗುತ್ತಿದೆ ಎಂದು ತಿಳಿದಿದ್ದರೂ ಮೌನವಹಿಸಬೇಕಾದ ಸ್ಥಿತಿಯಲ್ಲಿ ರೈತರಿದ್ದಾರೆ. ನಾವು ಆತ್ಮವಲೋಕನದ ಕಾಲಘಟ್ಟದಲ್ಲಿದ್ದೇವೆ ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.
ಅವರು ಇಲ್ಲಿನ ಆರ್.ಎನ್. ಶೆಟ್ಟಿ ಸಭಾಭವನದ ಮಿನಿ ಹಾಲ್‌ನಲ್ಲಿ ನಡೆದ ಉಡುಪಿ ಜಿಲ್ಲಾ ರೈತ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಯಾವುದೇ ಪಕ್ಷದ ಜನಪ್ರತಿನಿಧಿಯೂ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಿಲ್ಲ. ಜನಪ್ರತಿನಿಧಿಗಳು ಜನರ ಪರವಾಗಿ ನಿಲ್ಲಬೇಕು. ಆದರೆ ಅವರು ಜಾತಿ ರಾಜಕಾರಣ, ಹಣ ಹಾಗೂ ಗುತ್ತಿಗೆದಾರರ ಓಲೈಕೆಗೆ ನಿಂತಿದ್ದಾರೆ ಎಂದು ಆರೋಪಿಸಿದರು.
ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಇದು ರೈತರ ಸ್ವತ್ತು. ಅದರ ವಸ್ತುಗಳ ಮಾರಾಟ ವಿಚಾರದಲ್ಲಿ 18 ಕೋಟಿ ಅವ್ಯವಹಾರವಾಗಿದೆ. ಆದರೆ ಕಾರ್ಖಾನೆಯ ತಳಗಟ್ಟಿನ ಕಲ್ಲು ಕಿತ್ತು ಮಾರಾಟ ಮಾಡಿದರೂ ಕೂಡಾ ನಮ್ಮ ರೈತರು ಮೌನ ವಹಿಸುತ್ತಾರೆ. ಪ್ರಮುಖ ರಾಜಕೀಯ ಪಕ್ಷಗಳು ಹೋರಾಟವನ್ನೇ ಮಾಡಿಲ್ಲ. 5 ಕೋಟಿ ವಂಚನೆ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲು ಸಾಧ್ಯವಿರುವ ಸರ್ಕಾರ, ಅಧಿಕಾರಿಗಳಿಗೆ ರೈತರು ಆಸ್ತಿ 18 ಕೋಟಿ ಅವ್ಯವಹಾರವಾದರೂ ಯಾವುದೇ ಕ್ರಮವಾಗಿಲ್ಲ. ವಾರಾಹಿ ಅಚ್ಚುಕಟ್ಟು ಪ್ರದೇಶದ ರೈತರ ಸಮಸ್ಯೆ ನೆನೆಗುದಿಗೆ ಬಿದ್ದಿದೆ. ಪ್ರಕೃತಿ ವಿಕೋಪದ ಅಡಿಯಲ್ಲಿ ಜಿಲ್ಲೆಗೆ ಬರುವ ಕೊಟ್ಯಾಂತರ ರೂ. ಹಣ ನಿರ್ದಿಷ್ಟ ಹಿತಾಸಕ್ತಿಗೆ ಬಳಕೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ವೋತ್ತಮ ಹೆಗ್ಡೆ ಹಾಲಾಡಿ ಮಾತನಾಡಿ ವರಾಹಿ ನೀರನ್ನು ಕುಡಿಯುವ ಉದ್ದೇಶಕ್ಕೆ ತಗೆದುಕೊಂಡು ಹೋಗಲು ನಾವು ವಿರೋಧ ಮಾಡಲಿಲ್ಲ. ಇವತ್ತು ಈ ಯೋಜನೆಯ ಶುದ್ದೀಕರಣ ಘಟಕ ನಿರ್ಮಾಣ ಕಾಮಗಾರಿಯಲ್ಲಿ ಆಗುತ್ತಿರುವ ಅವೈಜ್ಞಾನಿಕ ಕಾಮಗಾರಿಯಿಂದ ಸ್ಥಳೀಯ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಕುಡಿಯುವ ನೀರಿನ ಬಾವಿಗಳಿಗೆ ಕಲುಷಿತ ನೀರು ನುಗ್ಗುತ್ತಿದೆ. ಸಮೀಪದ ಹಲವಾರು ಎಕರೆ ಕೃಷಿ ಭೂಮಿಗೆ ಮರಳು, ಜಲ್ಲಿ ಮುಂತಾದ ಅಪಾಯಕಾರಿ ನಿರುಪಯೂಕ್ತ ವಸ್ತುಗಳು ಕೊಚ್ಚಿಕೊಂಡು ಬಂದು ನಿಂತಿವೆ. ಕೃಷಿಯೋಗ್ಯ ಭೂಮಿ ಕೃಷಿ ಮಾಡದಂತಾಗಿದೆ. ಕನಿಷ್ಠ ಆವರಣ ಗೋಡೆಯನ್ನು ನಿರ್ಮಿಸಲಿಲ್ಲ. ಜನ ರೊಚ್ಚಿಗೆದ್ದಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಿದರೆ ಕನಿಷ್ಠ ಮುಂದೆ ಬರುವ ಅಧಿಕಾರಿಗಳಿಗೆ ವ್ಯವಸ್ಥೆಯ ಬಗ್ಗೆ ಭಯವಾದರೂ ಮೂಡುತ್ತದೆ ಎಂದರು.
ಕೆದೂರು ಸದಾನಂದ ಶೆಟ್ಟಿ ಮಾತನಾಡಿ, ಅಕ್ರಮ ಸಕ್ರಮಕ್ಕೆ ಸಂಬಂಧಿಸಿ ಅರ್ಜಿ ನಮೂನೆ 57ರಲ್ಲಿ 9 ಸಾವಿರ ಅರ್ಜಿಗಳಿವೆ. 53ರಲ್ಲಿ 2 ಸಾವಿರ ಅರ್ಜಿಗಳನ್ನು ಸಲ್ಲಿಸಲಾಗಿದೆ. ಇತ್ಯಾರ್ಥ ಎಷ್ಟರ ಮಟ್ಟಿಗೆ ಆಗಿದೆ ಎನ್ನುವುದೇ ಪ್ರಶ್ನೆಯಾಗಿದೆ. ಅತಿಕ್ರಮಣ ಮಾಡಿಕೊಂಡ ಭೂಮಿಯ ಜಿಎಪಿಎಸ್ ಮಾಡುವ ಪ್ರಕ್ರಿಯೆ ಇತ್ಯಾದಿ ಹೊಸ ಹೊಸ ಆದೇಶಗಳನ್ನು ಅಧಿಕಾರಿಗಳು ಹೇಳುತ್ತಾರೆ. ಸಮಸ್ಯೆ ಜಟಿಲವಾಗುತ್ತ ಹೋಗುತ್ತದೆ. ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ತರಬೇಕು ಎಂದರು.
ಉಮೇಶ ಶೆಟ್ಟಿ ಶಾನ್ಕಟ್ಟು ಮಾತನಾಡಿ, ಬ್ರಹ್ಮಾವರ ಕೃಷಿ ಡಿಪ್ಲೋಮಾ ಕೋರ್ಸು ಆರಂಭವಾಗಲು ರೈತ ಸಂಘದ ಹೋರಾಟ ಮುಂಚೂಣಿಯಲ್ಲಿತ್ತು. ಧರಣಿ, ಸತ್ಯಾಗ್ರಹ, ಹೋರಾಟಗಳ ಮೂಲಕ ಬೇಡಿಕೆ ಈಡೇರಿದೆ. ರೈತರಿಗೆ ಅನುಕೂಲವಾಗಿದೆ. ಮುಂದೆ ವಿದ್ಯಾರ್ಥಿಗಳ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಮಾಹಿತಿ ನೀಡುವ ಕಾರ್ಯವೂ ಆಗಬೇಕಿದೆ ಎಂದರು. ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಸೀತಾರಾಮ ಗಾಣಿಗ ಹಾಲಾಡಿ ಧ್ವನಿಗೂಡಿಸಿ, ಕೃಷಿ ಡಿಪ್ಲೋಮಾ ಕೋರ್ಸಿಗೆ ಪ್ರತಿ ಗ್ರಾಮದಿಂದ ಒಂದೊಂದು ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಬೇಕು. ಈ ಕೋರ್ಸು ಮಾಡಿದರೆ ಮುಂದೆ ಕೃಷಿ, ತೋಟಗಾರಿಕಾ ಇಲಾಖೆಯಲ್ಲಿ ಉತ್ತಮ ಉದ್ಯೋಗವಕಾಶಗಳು ಸಿಗುವ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವ ಕೆಲಸ ಆಗಬೇಕು ಎಂದರು.
ವಸಂತ ಹೆಗ್ಡೆ ಮಾತನಾಡಿ ಜನಸ್ಪಂದನ ಸಭೆ ಕಾಟಾಚಾರಕ್ಕೆ ನಡೆಯುತ್ತಿದೆ. ಜನರ ಅಹವಾಲುಗಳಿಗೆ ಸ್ಪಂದನೆಯೇ ಸಿಗುತ್ತಿಲ್ಲ ಎಂದು ದೂರಿದರು. ಇದಕ್ಕೆ ಧ್ವನಿಗೂಡಿಸಿದ ಸಂಪಿಗೇಡಿ ಸಂಜೀವ ಶೆಟ್ಟಿ 15 ವರ್ಷಗಳ ಹಿಂದೆ ಜನಸ್ಪಂದನ ಅತ್ಯುತ್ತಮವಾಗಿ ನಡೆಯುತ್ತಿತ್ತು. ಜನಸಾಮಾನ್ಯರ ಅಭಿಪ್ರಾಯಗಳಿಗೆ ಅವಕಾಶವೇ ಸಿಗುತ್ತಿಲ್ಲದಿರುವುದು ವಿಷಾದನೀಯ ಕಂದಾಯ ಇಲಾಖೆಗಳಿಗೆ ಸಂಬಂಧಿಸಿ ಹಲವು ಜಿಜ್ಞಾಸೆಗಳಿರುತ್ತದೆ. ಮಧ್ಯವರ್ತಿಗಳ ಮೂಲಕವೇ ಎಲ್ಲ ಕೆಲಸಗಳು ನಡೆಯುವ ಸ್ಥಿತಿ ಇದೆ. ಈ ಬಗ್ಗೆ ರೈತ ಸಂಘದ ಸಭೆಗೆ ಜಿಲ್ಲಾಧಿಕಾರಿ ಅಥವಾ ಸಹಾಯಕ ಆಯುಕ್ತರು, ತಹಶೀಲ್ದಾರನ್ನು ಕರೆಸಿ ಮಾಹಿತಿ ಕೊಡಿಸಿದರೆ ಉತ್ತಮವಾಗುತ್ತದೆ ಎಂದರು.
ಸಭೆಯಲ್ಲಿ ವರಾಹಿ ಅಚ್ಚುಕಟ್ಟು ಪ್ರದೇಶದ ರೈತರ ಸಮಸ್ಯೆಗಳು, ರೈತರ ಪಂಪುಸೆಟ್‌ಳಿಗೆ ಆಧಾರ್ ನಂಬರ್ ನೋಂದಣಿ ಸರ್ಕಾರದ ಅದೇಶ, ಅಕ್ರಮ ಸಕ್ರಮ ಕುಮ್ಮಿ ಹಕ್ಕಿನ ವಿಚಾರಗಳ ಬಗ್ಗೆಯೂ ಚರ್ಚೆ ನಡೆಯಿತು. ಉದಯ ಕುಮಾರ್ ಶೆಟ್ಟಿ ವಂಡ್ಸೆ ಸಭೆಯಲ್ಲಿ ಚರ್ಚಿಸಲಾದ ಒಟ್ಟು ವಿಷಯಗಳ ಕುರಿತು ಸಂದರ್ಭೋಚಿತವಾಗಿ ಮಾತನಾಡಿದರು. ಸಭೆಯಲ್ಲಿ ಉಡುಪಿ ಜಿಲ್ಲಾ ರೈತ ಸಂಘದ ಪ್ರಮುಖರಾದ ಬಾಬು ಶೆಟ್ಟಿ ತಗ್ಗರ್ಸೆ, ಶರತ್ ಶೆಟ್ಟಿ ಬಾಳಿಕೆರೆ, ಮಲ್ಯಾಡಿ ಶಿವರಾಮ ಶೆಟ್ಟಿ, ಕೃಷ್ಣದೇವ ಕಾರಂತ ಕೋಣಿ, ಜಯರಾಮ ಶೆಟ್ಟಿ, ಅಶೋಕ್ ಶೆಟ್ಟಿ ಚೋರಾಡಿ, ಪ್ರದೀಪ ಬಲ್ಲಾಳ, ಅಶೋಕ್ ಪೂಜಾರಿ ಬೀಜಾಡಿ, ಎಲ್ಲಾ ವಲಯ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಣಿ ಬೆಳೆ ಸ್ವಾಗತಿಸಿದರು.