ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಮುದಾಯದ ಅಭ್ಯುದಯಕ್ಕಾಗಿ ರೋಟರಿ ನೂರಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಸ್ನೇಹ, ಸೇವೆ, ವಿಭಿನ್ನತೆಯಲ್ಲಿ ಏಕತೆಯನ್ನು ಸಾಧಿಸುವುದರೊಂದಿಗೆ ಸಮಾಜದ ಅಭ್ಯುದಯಕ್ಕಾಗಿ ಮುಂದಾಳತ್ವ ವಹಿಸಿಕೊಳ್ಳುವ ಕಾರ್ಯಗಳು ರೋಟರಿ ಮೂಲಕ ನಿರಂತರವಾಗಿ ನಡೆಯುತ್ತಲೇ ಇವೆ ಎಂದು ರೋಟರಿ ಜಿಲ್ಲೆ 3180ರ ಮಾಜಿ ಜಿಲ್ಲಾ ಗವರ್ನ್‌ರ್ ಡಾ. ಭರತೇಶ್ ಅದಿರಾಜ್ ಅವರು ಹೇಳಿದರು.
ಅವರು ಭಾನುವಾರ ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ರೋಟರಿ ಕ್ಲಬ್ ಬೈಂದೂರು ನೇತೃತ್ವದಲ್ಲಿ ಆಯೋಜಿಸಲಾದ ಆರ್.ಐ ಡಿಸ್ಟಿಕ್ 3182 ಝೋನ್-1ರ ಝೋನಲ್ ಮೆಂಬರ್‌ಶಿಪ್ ಡೆವೆಲಪ್‌ಮೆಂಟ್ ಮತ್ತು ಪಬ್ಲಿಕ್ ಇಮೇಜ್ ಸೆಮಿನಾರ್‌ನಲ್ಲಿ ಪಬ್ಲಿಕ್ ಇಮೇಜ್ ಬಗ್ಗೆ ಉಪನ್ಯಾಸ ನೀಡಿ ರೋಟರಿಯಿಂದ ಕೈಗೊಳ್ಳುವ ಸಮಾಜಮುಖಿ ಕಾರ್ಯಗಳನ್ನು ಸಮುದಾಯಕ್ಕೆ ತಿಳಿಯುವಂತೆ ಮಾಡುವುದು ಕೂಡ ಆಯಾ ಕ್ಲಬ್‌ಗಳ ಜವಾಬ್ದಾರಿಯಾಗಿದೆ. ರೋಟರಿಯ ಸಾಮಾಜಿಕ ಮೌಲ್ಯ ಹೆಚ್ಚಿಸುವಂತಹ ಕಾರ್ಯಗಳು ನಿರಂತರವಾಗಿ ಆಗಬೇಕಿದೆ ಎಂದರು.
ರೋಟರಿ ಝೋನಲ್ ಲರ್ನಿಂಗ್ ಫೆಸಿಲಿಟೇಟರ್ ಡಾ. ಉಮೇಶ್ ಪುತ್ರನ್ ಅವರು ಮೆಂಬರ್‌ಶಿಪ್ ಡೆವಲಪ್‌ಮೆಂಟ್ ಬಗ್ಗೆ ಉಪನ್ಯಾಸ ನೀಡಿ ಅಂತರಾಷ್ಟ್ರೀಯ ಸಂಸ್ಥೆಯಾದ ರೋಟರಿಯಲ್ಲಿ ವಿವಿಧ ವೃತ್ತಿ ಹಾಗೂ ಉದ್ಯೋಗದಲ್ಲಿ ತೊಡಗಿಸಿಕೊಂಡವರು ಸದಸ್ಯರಾಗುತ್ತಾರೆ. ಹೊಸ ಸದಸ್ಯರನ್ನು ರೋಟರಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಮತ್ತು ಧೀರ್ಘಾವಧಿಯಲ್ಲಿ ರೋಟರಿಯೊಂದಿಗೆ ಮುಂದುವರಿಯುಂತೆ ಮಾಡುವುದು ಮುಖ್ಯವಾಗಿದೆ ಎಂದರು.
ಈ ಸಂದರ್ಭ ಬೈಂದೂರು ರೋಟರಿ ಸಮುದಾಯ ಭವನವನ್ನು ನವೀಕರಿಸಿದ ಬೈಂದೂರು ರೋಟರಿ ಟ್ರಸ್ಟ್ ಪರವಾಗಿ ಟ್ರಸ್ಟ್‌ನ ಅಧ್ಯಕ್ಷರಾದ ಕೆ. ಬಾಬು ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ರೋಟರಿ ವಲಯ 1ರ ಸಹಾಯಕ ಗವರ್ನರ್ ಡಾ. ಬಿ. ರಾಜೇಂದ್ರ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಮೋಹನ್ ರೇವಣ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಹಾಯಕ ಗವರ್ನ್‌ರ್ ಕೆ.ಕೆ. ಕಾಂಚನ್, ವಲಯ ಸೇನಾನಿಗಳಾದ ಪ್ರದೀಪ್ ಡಿ.ಕೆ, ವೆಂಕಟೇಶ್ ನಾವುಂದ, ಮೆಂಬರ್‌ಶಿಪ್ ಡೆವಲಪ್‌ಮೆಂಟ್ ವಲಯ ಸಂಯೋಜಕ ಶ್ರೀನಾಥ್ ಜೆ. ರಾವ್, ಪಬ್ಲಿಕ್ ಇಮೇಜ್ ವಲಯ ಸಂಯೋಜಕ ಗಣೇಶ್ ಐತಾಳ್, ಪಬ್ಲಿಕ್ ಇಮೇಜ್ ಕ್ಲಬ್ ಛೇರ್ಮನ್ ಐ. ನಾರಾಯಣ್, ಪಬ್ಲಿಕ್ ಇಮೇಜ್ ಕ್ಲಬ್ ಛೇರ್ಮನ್ ಮಂಜುನಾಥ ಮಹಾಲೆ ಉಪಸ್ಥಿತರಿದ್ದರು.
ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಮೋಹನ್ ರೇವಣ್ಕರ್ ಸ್ವಾಗತಿಸಿ, ಕಾರ್ಯದರ್ಶಿ ಸುನಿಲ್ ಹೆಚ್. ಜಿ. ಬೈಂದೂರು ವಂದಿಸಿದರು. ಪೂರ್ವಾಧ್ಯಕ್ಷ ಹೆಚ್. ಉದಯ್ ಆಚಾರ್ ಪ್ರಾರ್ಥಿಸಿದರು. ಕ್ಲಬ್ ಸರ್ವಿಸ್ ಛೇರ್ಮನ್ ಸೋಮನಾಥನ್ ಆರ್ ಕಾರ್ಯಕ್ರಮ ನಿರೂಪಿಸಿದರು.