ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕೆಲವು ನಿಯಮ ಬದಲಾವಣೆ ಮಾಡಿರುವುದರಿಂದ ತೊಂದರೆಯಾಗುತ್ತಿದ್ದು, ನಿಯಮ ಸಡಿಲಗೊಳಿಸುವಂತೆ ಆಗ್ರಹಿಸಿ ಎನ್.ಎಸ್.ಯು.ಐ ಕುಂದಾಪುರ ತಾಲೂಕು ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.
ಕಾಲೇಜಿನಲ್ಲಿ ಅವಧಿ ಮಧ್ಯದಲ್ಲಿ ತರಗತಿಗೆ ರಜೆ ಹಾಕಲು, ಬೆಳಿಗ್ಗೆ ತಡವಾಗಿ ತರಗತಿಗೆ ತೆರಳಲು ಮೊದಲಿನಿಂದಲೂ ಅನುಮತಿ ಇದೆ. ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ಇದ್ದು, ಎಲ್ಲಾ ದಿನವೂ ಸರಿಯಾದ ಸಮಯಕ್ಕೆ ಕಾಲೇಜಿಗೆ ಬರಲು ಸಾಧ್ಯವಾಗುತ್ತಿಲ್ಲ. ದೂರದ ಪ್ರದೇಶದಿಂದ ಬರುವವರಿಗೆ ಕೆಲವೊಮ್ಮೆ ಮೊದಲ ತರಗತಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ನಿಯಮ ಬದಲಾವಣೆ ಮಾಡಿರುವುದರಿಂದ ಅದು ಸಾಧ್ಯವಾಗುವುದಿಲ್ಲ. ಇನ್ನು ತುರ್ತು ಕೆಲಸಕ್ಕೆ ಒಂದು ತರಗತಿಗೆ ರಜೆ ಹಾಕಿ ಹೋಗಲು, ಲೈಬ್ರೆರಿಗೆ ಹೋಗಲು, ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಕಾಲೇಜು ಆಡಳಿತ ಮಂಡಳಿ ಏಕಾಏಕೀ ನಿಯಮ ಬದಲಾವಣೆ ಮಾಡಿರುವುದರಿಂದ ವಿದ್ಯಾರ್ಥಿಗಳಿಗೆ ಅತೀವ ತೊಂದರೆಯಾಗಿದೆ. ಆಡಳಿತ ಮಂಡಳಿ ಹಿಂದೆ ಇದ್ದ ನಿಯಮಗಳನ್ನೇ ಮುಂದುವರಿಸುವಂತೆ ಪ್ರತಿಭಟನೆ ನಿರತ ವಿದ್ಯಾರ್ಥಿಗಳು ಆಗ್ರಹಿಸಿದರು.
ಕಾಲೇಜು ಗೇಟ್ ಹೊರಭಾಗದಲ್ಲಿ ಪ್ರತಿಭಟನೆ ಕೈಗೊಂಡ ವಿದ್ಯಾರ್ಥಿಗಳು ಕಾಲೇಜು ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದರು.
**ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಕಾಲೇಜು ಆಡಳಿತ ಮಂಡಳಿ ಚರ್ಚಿಸಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿದೆ. ಕಾಲೇಜು ಅವಧಿಯಲ್ಲಿ ಪಠ್ಯ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. – ಡಾ. ಶುಭಕರಾಚಾರಿ, ಪ್ರಾಂಶುಪಾಲರು