ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬ್ರಹ್ಮಶ್ರೀ ನಾರಾಯಣ ಗುರುಗಳು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸತ್ಯ ವಾಕ್ಯದ ಮೂಲಕ ಮೌಢ್ಯ ಮತ್ತು ಅಂಧ ಶೃದ್ಧೆಯಿಂದ ನಲುಗಿ ಹೋಗಿರುವ ಶೋಷಿತ ಸಮಾಜವನ್ನು, ಸಾಮಾಜಿಕ ಪರಿವರ್ತನೆಯ ಮೂಲಕ ಮೌನಕ್ರಾಂತಿ ನಡೆಸಿ ಸಮಾಜ ನಿರ್ಮಾಣಕ್ಕೆ ಮೇಲ್ಪಂಕ್ತಿ ಹಾಕಿದ ಮಹಾನ್ ದಾರ್ಶನಿಕರಾಗಿದ್ದಾರೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ನಾಗೂರು ಮಹಾಲಸಾ ಕಲ್ಚರಲ್ ಹಾಲ್‌ನಲ್ಲಿ ಸೋಮವಾರ ಬಿಜೆಪಿ ಬೈಂದೂರು ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾ ನೇತೃತ್ವದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 170ನೇ ಜನ್ಮ ದಿನಾಚರಣೆಯ ಅಂಗವಾಗಿ ನಾರಾಯಣಗುರು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಶೇ. 50ರಷ್ಟು ಜನರು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು, ಕಳೆದ 70 ವರ್ಷದಿಂದ ಅಕಾರ ನಡೆಸಿದ ಕಾಂಗ್ರೆಸ್ ಪಕ್ಷ ಕೇವಲ ಮತಕ್ಕಾಗಿ ಅವರನ್ನು ಬಳಸಿಕೊಂಡಿದೆಯೇ ಹೊರತು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿಲ್ಲ. ಕಾಂಗ್ರೆಸ್ ಅಕಾರಕ್ಕಾಗಿ ಮೊಸಳೆ ಕಣ್ಣೀರು ಸುರಿಸುವ ಕೆಲಸ ಮಾಡುತ್ತಿದೆ ಎಂದು ದೂರಿದ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರದಲ್ಲಿ ಕೋಟಿ ಚನ್ನಯ್ಯ ಥೀಮ್ ಪಾರ್ಕ್, ನಾರಾಯಣಗುರು ಜಯಂತಿ ಆಚರಣೆ, ಗರಡಿಗಳ ಅಭಿವೃದ್ಧಿಗೆ ಅನುದಾನ ನೀಡಿರುವುದಲ್ಲದೇ ಬೈಂದೂರು ಸೇರಿದಮತ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗಗಳ ಸಮುದಾಯ ಭವನ ನಿರ್ಮಾಣಕ್ಕೆ ಸುಮಾರು 370 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದರು.
ಬೈಂದೂರು ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಶಿವರಾಜ್ ಪೂಜಾರಿ ಗೋಳಿಹೊಳೆ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಚಿಕ್ಕಮಗಳೂರು ಸಂಸದ ಶ್ರೀನಿವಾಸ ಪೂಜಾರಿ, ಶಾಸಕ ಗುರುರಾಜ ಗಂಟಿಹೊಳೆ, ಕುಂದಾಪುರ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರಕುಮಾರ, ವಿಠಲ ಪೂಜಾರಿ, ಉಡುಪಿ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ವಿಜಯ ಕೊಡವೂರು, ಬಿಜೆಪಿ ಬೈಂದೂರು ಮಂಡಲದ ಅಧ್ಯಕ್ಷ ದೀಪಕ್‌ಕುಮಾರ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಮಹೇಂದ್ರ ಪೂಜಾರಿ, ಉಮೇಶ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಉಡುಪಿ ಜಿಲ್ಲಾಬಿಜೆಪಿ ಪ್ರಧಾನ ಕಾರ್ಯದರ್ಶಿ ದೀಪಕ್‌ಕುಮಾರ ಶೆಟ್ಟಿ, ಕಿರಿಮಂಜೇಶ್ವರ ಗ್ರಾ.ಪಂ. ಅಧ್ಯಕ್ಷ ಶೇಖರ ಖಾರ್ವಿ, ಬಿಜೆಪಿ ಮುಖಂಡರಾದ ಚಂದ್ರ ಜೋಗಿ, ರವಿ ಮಡಿವಾಳ, ರತನ್ ರಮೇಶ ಪೂಜಾರಿ, ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸುಮಾರು 25 ಸಮಾಜದ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ರಾಘವೇಂದ್ರ ಕೊಠಾರಿ ಸ್ವಾಗತಿಸಿದರು. ರಾಘವೇಂದ್ರ ತಗ್ಗರ್ಸೆ ನಿರೂಪಿಸಿದರು. ಮಂಜುನಾಥ ದೇವಾಡಿಗ ಉಪ್ಪುಂದ ವಂದಿಸಿದರು.