ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಅವರು ಮೂಲತಃ ಕರ್ನಾಟಕದ ಬೈಂದೂರಿನವರು. ಅವರು ಕತಾರಿನ ಗಲ್ಫಾರ್ ಅಲ್ ಮಿಸ್ ನಾದ್ ಇಂಜಿನಿಯರಿಂಗ್ ಹಾಗೂ ಕಾಂಟ್ರಾಕ್ಟ್ ಸಂಸ್ಥೆಯನ್ನು 2007ನೇ ಇಸವಿಯಲ್ಲಿ ಕೆಲಸಕ್ಕೆ ಸೇರಿದರು. ಈಗ ಪ್ರಸ್ತುತ ಗುಣಮಟ್ಟ ಕಾಯ್ದಿರಿಸುವ ವಿಭಾಗದಲ್ಲಿ ಅಭಿಯಂತರರಾಗಿ ಹಾಗೂ ಕಾಮಗಾರಿಗಳ ಸಹಯೋಗದ ಕಾರ್ಯನಿರ್ವಹಿಸುತ್ತಿದ್ದಾರೆ.
ಕತಾರಿನಲ್ಲಿ ಯಶಸ್ವಿಯಾಗಿ ಸಂಪೂರ್ಣಗೊಂಡಿರುವ ಹಲವು ಉನ್ನತಮಟ್ಟದ ಕಾಮಗಾರಿಗಳಲ್ಲಿ ಇವರ ಪಾಲು ಉಂಟು. ಪ್ರತ್ಯೇಕವಾಗಿ ಕತಾರಿನಲ್ಲಿನ ಪರಿಸರಸ್ನೇಹಿ, ಬೆಳವಣಿಗೆ ಹಾಗೂ ಸಮರ್ಥನೀಯತೆಗೆ ಸಂಬಂಧಿಸಿದ ಕಾಮಗಾರಿಗಳಲ್ಲಿ ಶ್ರೀಯುತರು ಕಾರ್ಯನಿರ್ವಹಿಸಿದ್ದಾರೆ.
ಅವರು ಸಕ್ರಿಯವಾಗಿ ಸಮುದಾಯ ಹಾಗೂ ಸಮಾಜಸೇವಾ ಕೈಂಕರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪೂರ್ವದಲ್ಲಿ ಕರ್ನಾಟಕ ಸಂಘ ಕತಾರಿನ ಉಪಾಧ್ಯಕ್ಷರಾಗಿ, ಹಾಗೂ ಭಾರತೀಯ ಸಮುದಾಯ ಹಿತೈಷಿ ವೇದಿಕೆಯ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವರು.
ಹಲವಾರು ಸಂಘ ಸಂಸ್ಥೆಗಳ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಲ್ಲದೆ ಬಹಳಷ್ಟು ಪ್ರಶಸ್ತಿಗಳನ್ನು ಇವರ ಅವಿರತ ಸೇವೆಯನ್ನು ಗುರುತಿಸಿ ಇವರಿಗೆ ನೀಡಲಾಗಿದೆ. ಪ್ರಸ್ತುತ ಇವರು ಎರಡನೇ ಬಾರಿಗೆ ಭಾರತೀಯ ದೂತಾವಾಸದ ಆಶ್ರಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಗಲ್ಫಾರ್ ಟೋಸ್ಟ್ ಮಾಸ್ಟರ್ ಸಂಘದ ಅಧ್ಯಕ್ಷರಾಗಿ ಮೂರನೇ ಬಾರಿ ಆಯ್ಕೆಗೊಂಡು ಸೇವೆ ಸಲ್ಲಿಸುತ್ತಿದ್ದಾರೆ.
ಕರೋನಾ ಮಹಾಮಾರಿಯ ಸಮಯದಲ್ಲಿ ಇವರು ಹಲವಾರು ಸಂತ್ರಸ್ತರಿಗೆ ಅನ್ನ ಆಹಾರಗಳನ್ನು ನೀಡುವುದಲ್ಲದೆ ನೂರಾರು ಜನರಿಗೆ ಕತಾರಿನಿಂದ ಭಾರತಕ್ಕೆ ಹಿಂದಿರುಗಲು ವಿಮಾನ ಸೇವೆಯನ್ನು ಕಲ್ಪಿಸಿಕೊಡುವ ಕಾರ್ಯದಲ್ಲಿ ಸಹಾಯ ನೀಡಿರುವರು.
ಭಾರತೀಯ ಸಮುದಾಯ ಕೇಂದ್ರದ ಅಶೋಕ ಸಭಾಂಗಣದಲ್ಲಿ ನಡೆದ ಅಭಿಯಂತರ ದಿನಾಚರಣೆ ಕಾರ್ಯಕ್ರಮದಲ್ಲಿ ಕತಾರ್ ದೇಶಕ್ಕೆ ಭಾರತೀಯ ರಾಯಭಾರಿಗಳಾದ ಘನವೆತ್ತ ವಿಪುಲ್ ಅವರು ಮತ್ತು ಭಾರತೀಯ ಸಾಂಸ್ಕೃತಿಕ ಕೇಂದ್ರ ಹಾಗೂ ಕರ್ನಾಟಕ ಸಂಘ ಕತಾರ್ ಆಡಳಿತ ಸಮಿತಿಯ ಸದಸ್ಯರು ಸೇರಿ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ಅಭಿಯಂತರ ಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿದ ನಂತರ, ಸುಬ್ರಮಣ್ಯ ಹೆಬ್ಬಾಗಿಲು ಅವರು ತಮ್ಮ ಭಾಷಣದಲ್ಲಿ ಪ್ರಶಸ್ತಿ ಪ್ರಧಾನ ಮಾಡಿದ ಕರ್ನಾಟಕ ಸಂಘ ಕತಾರ್ ಅಧ್ಯಕ್ಷರು ಹಾಗೂ ಆಡಳಿತ ಸಮಿತಿ ಸದಸ್ಯರಿಗೆ ವಂದನೆಗಳನ್ನು ಸಲ್ಲಿಸುತ್ತ ತಾವು ನಡೆದು ಬಂದ ಹಾದಿಯಲ್ಲಿ ನೆನಪುಗಳನ್ನುಹಂಚಿಕೊಂಡರು. 17 ವರ್ಷಗಳ ಹಿಂದೆ ಜೀವನಾಂಶವನ್ನು ಅರಸಿ ಕತಾರಿಗೆ ಬಂದಾಗ, ಹೆಚ್ಚು ಜನರ ಪರಿಚಯವಿರಲಿಲ್ಲ. ಮನೆ ಬಿಟ್ಟರೆ ಕೆಲಸ ಇಷ್ಟೇ ಅವರ ಓಡಾಟ. ಈಗ ಸಮಾಜದಲ್ಲಿ ತಮ್ಮ ಸಂಪರ್ಕದ ವಿಸ್ತಾರವನ್ನು ಹೆಚ್ಚಿಸುತ್ತ, ಸ್ನೇಹಿತರು, ಸಹೋದ್ಯೋಗಿಗಳು ಹಾಗು ಸಮುದಾಯದ ಮುಖಂಡರೊಂದಿಗೆ ತಮ್ಮ ಸ್ನೇಹಪೂರ್ವಕ ಒಡನಾಟದೊಂದಿಗೆ ಈಗ ಬಹುತೇಕ ಎಲ್ಲರ ಪರಿಚಯವನ್ನು ಮಾಡಿಕೊಂಡು ಸ್ನೇಹಿತರ ವೃತ್ತವನ್ನು ವಿಶಾಲವಾಗಿಸಿರುವುದಕ್ಕೆ ಎಲ್ಲರನ್ನು ವಿನಮ್ರತೆಯಿಂದ ನಮಿಸಿದರು.
ಪ್ರತಿದಿನವು ಮುಂಜಾನೆ ಪ್ರಾರಂಭಿಸುವ ಮುನ್ನ ಇಂದು ಅತಿ ಹೆಚ್ಚು ಜನರಿಗೆ ತಮ್ಮ ಸಹಾಯವನ್ನು ಮಾಡುವ ಸಂಕಲ್ಪವನ್ನು ಮಾಡಿದ ನಂತರ ದಿನವನ್ನು ಪ್ರಾರಂಭಿಸುತ್ತಾರೆ. ಮೊದಲು ತಮ್ಮ ಸಂಸ್ಥೆಯ ಕಾರ್ಯವನ್ನು ನಿರ್ವಹಿಸುತ್ತಾ ವಿವಿಧ ಕಾಮಗಾರಿಗಳಲ್ಲಿ ಯಶಸ್ವಿಯಾಗಿ ಚಟುವಟಿಕೆಗಳನ್ನು ಸಂಪೂರ್ಣಗೊಳಿಸಿದ ನಂತರ ಈ ಸಮಾಜ ಸೇವಾ ಕೈಂಕರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವರು. ಇವರ ಅಸ್ತಿತ್ವದ ಪ್ರೇರಣೆಯೇ ಸಮುದಾಯ ಸೇವೆ ಹಾಗೂ ಸಾಮಾಜಿಕ ಅಭಿವೃದ್ಧಿ.ಶ್ರೀಯುತರ ಅವಿರತ, ನಿಸ್ವಾರ್ಥ ಸೇವೆ, ಕತಾರಿನಲ್ಲಿರುವ ಭಾರತೀಯ ಸಮುದಾಯಕ್ಕೆ ನಿರಂತರವಾಗಿ ನೆರವೇರುತ್ತಿರಲಿ ಎಂದು ಆಶಿಸುತ್ತಾ ಸುಬ್ರಹ್ಮಣ್ಯ ಹೆಬ್ಬಾಗಿಲು ಹಾಗೂ ಅವರ ಕುಟುಂಬಕ್ಕೆ ಶುಭಾಶಯಗಳು ಕೋರಿದ್ದಾರೆ.