ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಅ.03: ವಿಧಾನ ಪರಿಷತ್ ಸ್ಥಳಿಯಾಡಳಿತ ಕ್ಷೇತ್ರದ ಉಪಚುನಾವಣೆ ಅ.21ರಂದು ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದು ಕಾಂಗ್ರೆಸ್ ಅಭ್ಯರ್ಥಿ ಎಸ್. ರಾಜು ಪೂಜಾರಿ ಅವರು ಮಂಗಳೂರು ಚುನಾವಣಾಧಿಕಾರಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರಿಗೆನಾಮಪತ್ರ ಸಲ್ಲಿಸಿದರು.
ಪ್ರತ್ಯೇಕ ಎರಡು ನಾಮಪತ್ರ ಸಲ್ಲಿಸುವ ವೇಳೆ ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಮುಖಂಡರುಗಳಾದ ರಮಾನಾಥ ರೈ, ಜಯಪ್ರಕಾಶ್ ಹೆಗ್ಡೆ, ಐವನ್ ಡಿಸೋಜಾ, ಉಡುಪಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ದಿನೇಶ್ ಹೆಗ್ಡೆ ಮೊಳಹಳ್ಳಿ, ಉದಯಕುಮಾರ್ ಶೆಟ್ಟಿ, ಪ್ರಸಾದ್ ಕಾಂಚನ್ ಉಪಸ್ಥಿತರಿದ್ದರು.
ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಮಾತನಾಡಿ, 20 ವರ್ಷಗಳಿಂದ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಗ್ರಾಪಂ, ತಾಪಂ ಸದಸ್ಯನಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷನಾಗಿ ಅನುಭವ ಹೊಂದಿದ್ದೇನೆ. ಸ್ಥಳೀಯ ಸಂಸ್ಥೆಗಳ ಎಲ್ಲಾ ಸಮಸ್ಯೆಗಳ ಅರಿವು ನನಗಿದೆ. ಆದ ಕಾರಣ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.