ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಅ.30: ಮಣ್ಣು ತುಂಬಿದ ಮಿನಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಇದೆ ವೇಳೆ ಎದುರಿನಿಂದ ಸ್ಕೂಟಿ ಚಲಾಯಿಸಿಕೊಂಡು ಬರುತ್ತಿದ್ದ ಮಹಿಳೆಯು ವಾಹನ ಸಹಿತ ಲಾರಿಯಿಂದ ಬಿದ್ದ ಮಣ್ಣಿನಡಿ ಸಿಲುಕಿಕೊಂಡ ಘಟನೆ ಕಿರಿಮಂಜೇಶ್ವರ ಗ್ರಾಮದ ನಾಗೂರು – ಉಪ್ರಳ್ಳಿ ರಸ್ತೆಯಲ್ಲಿನ ತಿರುವಿನಲ್ಲಿ ಬುಧವಾರ ನಡೆದಿದೆ. ಮಣ್ಣಿನಲ್ಲಿ ಸಿಲುಕಿಕೊಂಡಿದ್ದ ಮಹಿಳೆ ಆರತಿ ಶೆಟ್ಟಿ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೇರೂರು ಕಡೆಯಿಂದ ನಾಗೂರಿಗೆ ತೆರಳುತ್ತಿದ್ದ ಮಣ್ಣು ತುಂಬಿದ ಮಿನಿ ಲಾರಿಯೊಂದು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿದೆ. ಇದೇ ವೇಳೆ ನಾಗೂರಿನಿಂದ ನೂಜಾಡಿಗೆ ತೆರಳುತ್ತಿದ್ದ ಮಹಿಳೆಯ ಮೇಲೆ ಲಾರಿಯಲ್ಲಿದ್ದ ಮಣ್ಣು ಬಿದ್ದಿದೆ. ಲಾರಿ ಬೀಳುವ ವೇಳೆ ಸ್ಕೂಟಿಯನ್ನು ಸಾಕಷ್ಟು ಎಡಬದಿಗೇ ತಿರುಗಿಸಿದ್ದರಿಂದ ಲಾರಿ ಮೈಮೇಲೆ ಬಿಳುವ ದೊಡ್ಡ ಅಪಾಯದಿಂದ ಮಹಿಳೆ ಪಾರಾದರು. ಘಟನೆಯ ಪ್ರತ್ಯಕ್ಷದರ್ಶಿ ಇನ್ನೊಂದು ವಾಹನದಲ್ಲಿದ್ದ ಕೋಡಿ ಅಶೋಕ ಪೂಜಾರಿ ಎಂಬುವವರು ತಕ್ಷಣ ಮಹಿಳೆಯ ಮೇಲೆ ಬಿದ್ದಿದ್ದ ಮಣ್ಣನ್ನು ಸರಿಸಿ ಅವರ ಮುಖವನ್ನು ಮೇಲಕ್ಕೆತ್ತಿದ್ದಾರೆ. ಅಷ್ಟರಲ್ಲಿ ಸ್ಥಳೀಯರಾದ ಚಂದ್ರಶೀಲ ಶೆಟ್ಟಿ, ರಿಕ್ಷಾ ಚಾಲಕರು ಹಾಗೂ ಇನ್ನಿತರರು ಸ್ಥಳಕ್ಕಾಗಮಿಸಿ, ಲಾರಿಯಲ್ಲಿ ಸಿಲುಕಿಕೊಂಡಿದ್ದ ಚಾಲಕ ಹಾಗೂ ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಹಿಳೆಗೆ ಗಾಯವಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ.
ಬೈಂದೂರು ಪೊಲೀಸರು ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.