ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಕನ್ನಡ ಸಾಹಿತ್ಯ ಸಂಘ ಮತ್ತು ಐಕ್ಯೂಎಸಿ ಇದರ ಆಶ್ರಯದಲ್ಲಿ ಕಲ್ಪತರು-2024 ಅಂತರ್ ತರಗತಿ ನೃತ್ಯ ರೂಪಕ ಕಾರ್ಯಕ್ರಮ ಕಾಲೇಜಿನ ಶ್ರೀ ವೀರರಾಜೇಂದ್ರ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ, ಕನ್ನಡಾಂಬೆಗೆ ಪುಷ್ಪ ನಮನ ಸಲ್ಲಿಸಿ, ಮಾತನಾಡಿದ ಉಡುಪಿ ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಬಿದ್ಕಲ್ ಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿನ ಉಪ- ಪ್ರಾಂಶುಪಾಲರಾದ ಕರುಣಾಕರ ಶೆಟ್ಟಿ ಮೊಗೆಬೆಟ್ಟು ‘ಕನ್ನಡ ಭಾಷೆ ಉಳಿಯಬೇಕಾದರೆ ಕನ್ನಡ ಭಾಷೆಯನ್ನು ಜಗತ್ತಿನಾದ್ಯಂತ ಪಸರಿಸುವ ಕಾರ್ಯ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಪನ್ಯಾಸಕ ಸುಧಾಕರ್ ವಕ್ವಾಡಿ, ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಹೆಚ್ಚು ಮಾತನಾಡುವ ಮೂಲಕ ಮುಂದಿನ ಜನಾಂಗಕ್ಕೆ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಸುವ ಕಾರ್ಯ ಆಗಬೇಕಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಚಂದ್ರಾವತಿ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವೆಲ್ಲ ಜಾಗತೀಕರಣ, ತಂತ್ರಜ್ಞಾನ ಯುಗದಲ್ಲಿದ್ದೇವೆ ಇದರಿಂದ ಕನ್ನಡಕ್ಕೆ ಸವಾಲುಗಳು ಜಾಸ್ತಿ ಆಗುತ್ತಲೇ ಇದೆ. ಸುದೀರ್ಘ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಶ್ರೀಮಂತ ಭಾಷೆಯಾಗಿರುವ ಕನ್ನಡವನ್ನು ಉಳಿಸಿ- ಬೆಳೆಸಿ- ಬಳಸುವ ಕೈಂಕರ್ಯ ಈ ತಾಯ್ನಾಡಿನ ಪ್ರತಿಯೊಬ್ಬರ ಮೇಲಿದೆ ಎಂದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರವಿಚಂದ್ರ ಮತ್ತು ಐಕ್ಯೂಎಸಿ ಸಂಚಾಲಕರಾದ ಸಂದೀಪ್ ಕೆ. ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಸಂಘದ ಸಂಯೋಜಕರಾದ ಮಮತಾ ಪ್ರಾಸ್ತಾವಿಕವಾಗಿ ಮಾತನಾಡಿದರು, ಕನ್ನಡ ಉಪನ್ಯಾಸಕಿ ಪ್ರಮೀಳಾ ಸ್ವಾಗತಿಸಿ, ಉಪನ್ಯಾಸಕ ಸಂದೀಪ್ ಕೆ. ವಂದಿಸಿದರು.
ಅಂತರ್ ತರಗತಿ ನೃತ್ಯ ರೂಪಕದ ತೀರ್ಪುಗಾರರಾಗಿ ಸೌಮ್ಯಾ, ಸುಪಲಿತಾ ಮನ್ ಪ್ರಿತ್ ಆಗಮಿಸಿದ್ದರು. ಕಾಲೇಜು ವಿದ್ಯಾರ್ಥಿಗಳಿಂದ ಕನ್ನಡ ನೃತ್ಯ ರೂಪಕದ ಸ್ಪರ್ಧೆ ನಡೆಯಿತು.