ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಕೋಟತಟ್ಟು ಕಾರಂತ ಥೀಂ ಪಾರ್ಕನಲ್ಲಿ ಕೋಟತಟ್ಟು ಗ್ರಾಮಪಂಚಾಯತ್, ಡಾ.ಕೋಟ ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಡಾ. ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಇವರುಗಳ ಆಶ್ರಯದಲ್ಲಿ ಡಾ. ಕೋಟ ಶಿವರಾಮ ಕಾರಂತ ಜನ್ಮದಿನೋತ್ಸವ ಮತ್ತು 20ನೇ ವರ್ಷದ ಹುಟ್ಟೂರ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.
ಕಾರ್ಯಕ್ರಮದಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಿ ಸಾಹಿತಿ ಪ್ರೋ. ಕೃಷ್ಣೆ ಗೌಡ ಮೈಸೂರು ಅವರು ಮಾತನಾಡಿ, ಕಾರಂತರೆಂದರೆ ಬಹು ವ್ಯಕ್ತಿತ್ವದ ಚಿಂತನಾಶೀಲ, ಪ್ರಯೋಗಶೀಲ ವಿವಿಧ ಸ್ತರದಲ್ಲಿ ಬೆಳಕ ಚೆಲ್ಲುವ ಅಪರೂಪದ ಶಕ್ತಿಯಾಗಿದ್ದರು, ಅವರಂತೆ ಎಲ್ಲರನ್ನು ಕಾಣಲು ಸಾಧ್ಯವಿಲ್ಲ ಅವರಿಗೆ ಅವರೇ ಸಾಟಿ ಎಂಬಂತೆ ತಮ್ಮ ಜೀವಿತ ಅವಧಿಯಲ್ಲಿ ಬದುಕಿ ತೊರಿಸಿದ್ದಾರೆ. ತನ್ನ ಕಾದಂಬರಿಯ ಮೂಲಕ ಪ್ರಪಂಚಕ್ಕೆ ನೈಜ ಚಿತ್ರಣದ ಚಿತ್ತಾರವನ್ನು ಪ್ರಯೋಗಿಸಿದ್ದಾರೆ. ಇಂಥಹ ಕಾರಂತರ ಪ್ರಶಸ್ತಿ ಪಡೆಯುವ ಸಾಲಿನಲ್ಲಿ ನನ್ನಂತವರ ಹೆಸರು ಮುಂಚೂಣಿಗೆ ನಿಲ್ಲಿಸಿದ್ದು ಸಾರ್ಥಕ್ಯ ಕಂಡ ಅನುಭವ ಸಿಕ್ಕಿದೆ. ಓರ್ವ ಶ್ರೇಷ್ಠ ಸಾಹಿತಿ ಈ ಮಣ್ಣಿನಲ್ಲಿ ಹುಟ್ಟವ ತಾಕತ್ತು ಮತ್ತೆಲ್ಲಿ ಕಾಣಲು ಸಾಧ್ಯ ಎಂದರು.
ಪ್ರಶಸ್ತಿ ಪ್ರದಾನಿಸಿದ ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯ ಶಂಕರ್ ಮಾತನಾಡಿ, ಕಾರಂತರ ಬದಕು ಅವರ ಹೋರಾಟದ ದಾರಿ ಹಲವು ಮಜಲುಗಳ ಕೇಂದ್ರವಾಗಿದೆ. ಕಾರಂತರು ಪಡೆದ ಜ್ಞಾನಪೀಠ ಈ ಜಗತ್ತಿಗೆ ಸದಾ ಹಸಿರಾಗಿ ಉಳಿದ ಶಾಶ್ವತ ಪೀಠವಾಗಿದೆ. ಕಾರಂತರೂರಿಗೆ ಬರುವುದೇ ನನ್ನ ಜನ್ಮ ಜನ್ಮದ ಭಾಗ್ಯವಾಗಿದೆ, ಅವರೊಬ್ಬ ಅಪರೂಪದ ಕನ್ನಡ ನಾಡೆ ಗೌರವ ನೀಡುವ ವ್ಯಕ್ತಿತ್ವವಾಗಿದೆ ಅಲ್ಲದೆ ಕಾರಂತರ ಹೆಸರಿನಲ್ಲಿ ಒಂದು ಪಂಚಾಯತ್ ನೀಡುವ ಪ್ರಶಸ್ತಿ ಕೃಷ್ಣನ ನಾಡಿನಲ್ಲಿ ಕೃಷ್ಣನಿಗೆ ಗೌರವ ದೊರೆತ್ತಿರುವುದು ಬಹುವಿಶೇಷಗಳಲ್ಲೊಂದಾಗಿದೆ. ಇದೊಂದು ಎಲ್ಲಾ ಗ್ರಾಮಪಂಚಾಯತ್ ಮಾದರಿ ಗ್ರಾಮವಾಗಿ ಪಸರಿಸಿಕೊಂಡಿದೆ ಎಂದರು.
ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಸಾಹಿತಿ ವಾಗ್ಮಿ ಪ್ರೋ. ಕೃಷ್ಣೆ ಗೌಡರಿಗೆ ರಾಜ್ಯಪಾಲ ಸಿ.ಎಚ್ ವಿಜಯಶಂಕರ್ ಪ್ರದಾನಿಸಿದರು. ಕಾರ್ಯಕ್ರಮವನ್ನು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಅವಿಭಜಿತ ಜಿಲ್ಲೆಗಳ ಸಾಧಕ ಗ್ರಾಮಪಂಚಾಯತ್ ಗಳಿಗೆ ಕಾರಂತ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ. ಕುಂದರ್, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದ ಪ್ರಶಾಂತ್ ಸೂರ್ಯ ಇವರುಗಳನ್ನು ಅಭಿನಂದಿಸಲಾಯಿತು. ಮುಖ್ಯ ಅಭ್ಯಾಗತರಾಗಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರ ಉಪ ವಿಭಾಗಾಧಿಕಾರಿ ಮಹೇಶ್ವಂದ್ರ, ಆಯ್ಕೆ ಸಮಿತಿಯ ಸಂಚಾಲಕ ಯು.ಎಸ್ ಶೆಣೈ , ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಕಾರಂತ ಹುಟ್ಟೂರ ಪ್ರಶಸ್ತಿ ರೂವಾರಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಾಧ್ಯಕ್ಷ ಆನಂದ್ ಸಿ. ಕುಂದರ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ನಿರೂಪಿಸಿ, ವಂದಿಸಿದರು. ಸಂಸದ ಆಪ್ತ ಕಾರ್ಯದರ್ಶಿ ಹರೀಶ್ ಕುಮಾರ್ ಶೆಟ್ಟಿ, ಗಿರೀಶ್ ಕುಮಾರ್ ಶೆಟ್ಟಿ, ಥೀಮ್ ಪಾಕ್೯ ಗ್ರಂಥಪಾಲಕಿ ಶೈಲಜ ಸಹರಿಸಿದರು.