ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಗರ್ಭಿಣಿ ಮಹಿಳೆಯರಿಗೆ ಆರಂಭದಲ್ಲಿಯೇ ತಾಯಿ ಕಾರ್ಡ್ ಅನ್ನು ನೀಡುವುದರೊಂದಿಗೆ ಕಾಲಕಾಲಕ್ಕೆ ಅವರ ಆರೋಗ್ಯ ತಪಾಸಣೆ ನಡೆಸುವುದರ ಜೊತೆಗೆ ಪೌಷ್ಠಿಕ ಆಹಾರಗಳ ಸೇವನೆ ಸೇರಿದಂತೆ ಮತ್ತಿತರ ಮಾಹಿತಿಗಳನ್ನು ಅವರುಗಳಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸೂಚನೆ ನೀಡಿದರು.
ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ತಾಯಿ ಮರಣ ತನಿಖಾ ಸಮಿತಿ ಸಭೆ, ಜಿಲ್ಲಾ ಲಸಿಕಾ ಕಾರ್ಯಪಡೆ ಸಮಿತಿ ಸಭೆ ಹಾಗೂ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಯಿ ಮತ್ತು ಮಕ್ಕಳ ಮರಣವನ್ನು ತಡೆಗಟ್ಟಲು ಎಲ್ಲಾ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸಬೇಕು. ಗರ್ಭಿಣಿ ಹಾಗೂ ಬಾಣಂತಿಯರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ, ಅವುಗಳ ಪ್ರಯೋಜನ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು. ಇವುಗಳ ಜೊತೆಗೆ ತಮ್ಮ ಮಗುವಿನ ಆರೈಕೆ ಕೈಗೊಳ್ಳುವ ಕುರಿತು ಮಾಹಿತಿಗಳನ್ನು ಒದಗಿಸಬೇಕು ಎಂದರು.
ಬಾಲ ಸುರಕ್ಷತಾ ಕಾರ್ಯಕ್ರಮದಡಿ ಶಾಲೆಗಳಲ್ಲಿ ಹಾಗೂ ಅಂಗನವಾಡಿಗಳಲ್ಲಿ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸುವ ಸಂದರ್ಭದಲ್ಲಿ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ ಅವರ ಪೋಷಕರುಗಳಿಗೆ ಈ ವಿಚಾರವನ್ನು ತಿಳಿಸುವುದರ ಜೊತೆಗೆ ಉಚಿತವಾಗಿ ಚಿಕಿತ್ಸೆ ಪಡೆಯಲು, ಸರಕಾರದ ಯೋಜನೆಗಳ ಮಾಹಿತಿಯನ್ನು ಅವರಿಗೆ ನೀಡುವುದರ ಜೊತೆಗೆ ಅಂತಹ ಮಕ್ಕಳು ಚಿಕಿತ್ಸೆ ಪಡೆದುಕೊಂಡ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು ಎಂದರು.
ನವಜಾತ ಶಿಶುಗಳಿಗೆ ಕಾಲಕಾಲಕ್ಕೆ ನೀಡುವ ಸಾರ್ವತ್ರಿಕ ಲಸಿಕೆಗಳನ್ನು ಹಾಕಿಸಲು ತಾಯಂದಿರುಗಳಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಿ, ತಪ್ಪದೇ ಮಕ್ಕಳಿಗೆ ಸಂಪೂರ್ಣ ಲಸಿಕೆ ಪಡೆಯುವಂತೆ ನೋಡಿಕೊಳ್ಳಬೇಕು ಎಂದ ಅವರು, 5 ವರ್ಷದ ವರೆಗಿನ ಮಕ್ಕಳಿಗೆ ಶೇ.87.24, 10 ವರ್ಷದ ವರೆಗಿನ ಮಕ್ಕಳಿಗೆ ಶೇ. 62.16 ಹಾಗೂ 16 ವರ್ಷದ ವರೆಗಿನ ಮಕ್ಕಳಿಗೆ ಶೇ. 55.43 ರಷ್ಟು ಲಸಿಕೆ ನೀಡಿದ್ದು, ಇದರ ಪ್ರಮಾಣ ಕಡಿಮೆ ಇದೆ. ಇವುಗಳನ್ನು ಪ್ರತಿಶತಃ ನೂರರಷ್ಟು ಸಾಧನೆ ಆಗಬೇಕು ಎಂದರು.
ಜಂತುಹುಳು ನಿವಾರಣಾ ದಿನಾಚರಣೆಯು ಡಿಸೆಂಬರ್ 9 ರಂದು ಜರುಗಲಿದ್ದು, ಮಾಫ್ ಅಫ್ ಡೇ ಯು ಡಿಸೆಂಬರ್ 16 ರಂದು ಜರುಗಲಿದೆ. ಜಿಲ್ಲೆಯ ಎಲ್ಲಾ 1 ರಿಂದ 19 ವರ್ಷದ ಮಕ್ಕಳಿಗೆ ಜಂತು ಹುಳು ನಿವಾರಣಾ ಮಾತ್ರೆಯನ್ನು ಅಂಗನವಾಡಿ, ಶಾಲೆ, ಕಾಲೇಜು ಹಾಗೂ ಕೈಗಾರಿಕಾ ತರಬೇತಿ ಹಾಗೂ ವೃತ್ತಿ ತರಬೇತಿ ಸಂಸ್ಥೆಗಳಲ್ಲಿ ನೀಡಲು ಸಂಬಂದಿಸಿದ ಎಲ್ಲಾ ಇಲಾಖೆಗಳು ಕ್ರಮ ವಹಿಸುವಂತೆ ತಿಳಿಸಿದರು.
ಜಂತುಹುಳು ನಿವಾರಣಾ ಉಚಿತ ಮಾತ್ರೆ ವಿತರಣೆ ಯಶಸ್ವಿಗೊಳಿಸಲು ಆರೋಗ್ಯ ಇಲಾಖೆಯ ಜೊತೆಗೆ ಇತರೆ ಎಲ್ಲಾ ಇಲಾಖೆಯವರು ಕೈಜೋಡಿಸಿ, ಯಶಸ್ವಿಗೊಳಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ ಗಡಾದ, ಜಿಲ್ಲಾ ಆರ್.ಸಿ. ಹೆಚ್ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ, ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶ್ರೀರಾಮರಾವ್, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಲತಾ ನಾಯಕ್, ಡಿ.ಎಸ್.ಓ ಡಾ. ನಾಗರತ್ನ, ವಿವಿಧ ಇಲಾಖೆಯ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.