ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಲಾರಿ ಮತ್ತು ಕೆಂಪುಕಲ್ಲು ಕೋರೆ ಮಾಲಕರ ಸಂಘದ ಎರಡು ಬಣಗಳ ನಡುವಿನ ಮುಸುಕಿನ ಗುದ್ದಾಟ, ತಾರಕಕ್ಕೇರಿ, ಒಂದೇ ದಿನ ಎರಡು ಪ್ರತ್ಯೇಕ ಹೋರಾಟ ನಡೆದ ಘಟನೆ ಶನಿವಾರ ಬೈಂದೂರಿನಲ್ಲಿ ನಡೆದಿದೆ.
ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಮರಳು ಮತ್ತು ಕೆಂಪುಕಲ್ಲು ಗಣಿಗಾರಿಕೆಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಶಾಸಕ ಗುರುರಾಜ ಗಂಟಿಹೊಳೆ, ದಿವಾಕರ್ ಶೆಟ್ಟಿ ಅವರ ನೇತೃತ್ವದಲ್ಲಿ ಇಲ್ಲಿನ ಆಡಳಿತಸೌಧದ ಎದುರು ಪ್ರತಿಭಟನೆ ನಡೆದರೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್‌ಕುಮಾರ್ ಶೆಟ್ಟಿ, ವಿಜಯಕುಮಾರ ಶೆಟ್ಟಿ ಅವರ ನೇತೃತ್ವದಲ್ಲಿ ಲಾರಿ ಮತ್ತು ಕೆಂಪುಕೋರೆ ಮಾಲಕರು ಹಾಗೂ ಕಾರ್ಮಿಕರು, ಇಲ್ಲಿನ ಅಂಡರ್‌ಪಾಸ್‌ನಿಂದ ಮೆರವಣೆಗೆ ಮೂಲಕ ಬೈಂದೂರು ತಾಲೂಕು ಆಡಳಿತಸೌಧಕ್ಕೆ ತೆರಳಿ ತಹಶೀಲ್ದಾರ ಅವರಿಗೆ ಮನವಿಪತ್ರ ಸಲ್ಲಿಸಿದರು.

ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಹಲವು ತಿಂಗಳಿನಿಂದ ಜಿಲ್ಲೆಯಾದ್ಯಂತ ಮರಳು ಮತ್ತು ಕೆಂಪುಕಲ್ಲು ಗಣಿಗಾರಿಕೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರು ಬೀದಿ ಬೀಳುವಂತಾಗಿದೆ, ಈ ಬಗ್ಗೆ ಹಲವು ಬಾರಿ ಸಂಬಂತ ಅಕಾರಿಗಳ ಸಭೆ ನಡೆಸಲಾಗಿದೆ, ಜನರಿಗಾದ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಇಂದು ಸಾಂಕೇತಿಕವಾಗಿ ಪ್ರತಿಭಟನೆ ಕೈಗೊಂಡಿದ್ದು, ಮುಂದಿನ ೧೦ ದಿನದೊಳಗೆ ಮರಳು ಮತ್ತು ಕೆಂಪು ಗಣಿಗಾರಿಕೆ ಪುನರ್ ಆರಂಭಗೊಳ್ಳದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಜಿಲ್ಲೆಯಲ್ಲಿ ಕಾನೂನಿನ ತೊಡಕಿನಿಂದಾಗಿ ಗಣಿಗಾರಿಕೆ ಆರಂಭಕ್ಕೆ ಅವಕಾಶ ದೊರೆಯುತ್ತಿಲ್ಲ, ಜನರಿಗಾದ ಸಮಸ್ಯೆಗಳ ಬಗ್ಗೆ ಈಗಾಗಲೇ ಉಸ್ತುವಾರಿ ಸಚಿವರು, ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ, ಮುಂದಿನ ಬೆಳಗಾವಿ ಅವೇಶನದಲ್ಲಿ ಕಾನೂನಿಗೆ ತಿದ್ದುಪಡಿ ತಂದು ಅಥವಾ ಕ್ಯಾಬಿನೆಟ್‌ನಲ್ಲಿ ವಿಶೇಷ ನಿರ್ಣಯ ಮಾಡುವ ಮೂಲಕ ಗಣಿಗಾರಿಕೆಗೆ ಅನುಮತಿ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ. ಒಂದು ವೇಳೆ ಡಿ. ೧೫ರೊಳಗೆ ಸರ್ಕಾರ ನಿರ್ಣಯ ತೆಗೆದುಕೊಳ್ಳದಿದ್ದರೆ, ಕಲ್ಲುಕೋರೆ ಮಾಲಕರು ಹಾಗೂ ಕಾರ್ಮಿಕರ ಜೊತೆ ನಾನು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇನೆ, ಯಾವುದೇ ಕಾರಣಕ್ಕೂ ಜನರಿಗೆ ಅನ್ಯಾಯವಾಗುವುದಕ್ಕೆ ಬಿಡುವುದಿಲ್ಲ ಎಂದರು.
ರೈತ ಸಂಘದ ಅಧ್ಯಕ್ಷ ದೀಪಕ್‌ಕುಮಾರ್ ಶೆಟ್ಟಿ ಮಾತನಾಡಿ, ಮರಳು ಮತ್ತು ಕೆಂಪುಕಲ್ಲು ಗಣಿಗಾರಿಕೆ ಪುನರ್ ಆರಂಭದ ಬಗ್ಗೆ ಪಕ್ಷಾತೀತವಾಗಿ ಹೋರಾಟ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ. ಇಂದು ತಹಶೀಲ್ದಾರ ಮೂಲಕ ಸಾಂಕೇತಿಕವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಡಿ. ೧೫ರೊಳಗೆ ಇತ್ಯರ್ಥವಾಗದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಈ ವೇಳೆ ಲಾರಿ ಮತ್ತು ಕೆಂಪುಕಲ್ಲು ಕೋರೆ ಮಾಲಕರ ಸಂಘದ ಪ್ರತಿನಿಧಿಗಳು, ಉಭಯ ಪಕ್ಷಗಳ ಪ್ರಮುಖರು ಉಪಸ್ಥಿತರಿದ್ದರು.















