ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಮತ್ತು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಡುಪಿ ಜಿಲ್ಲೆ ಹಾಗೂ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಪದವಿ ಪೂರ್ವ ವಿದ್ಯಾರ್ಥಿಗಳ ಮೈಸೂರು ವಿಭಾಗೀಯ ಮಟ್ಟದ ಸಾಂಸ್ಕೃತಿಕ ಮತ್ತು ಪಠ್ಯೇತರ ಸ್ಪರ್ಧೆಗಳು ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿಗಳಾದ ಮಮತಾ ದೇವಿ ಜಿ ಎಸ್. ಅವರು ಉದ್ಘಾಟಿಸಿದ ಮಾತನಾಡಿ, ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಅಂದರೆ ಅರ್ಧ ಜಯಶಾಲಿಯಾದಂತೆ. ಪಠ್ಯ ವಿಷಯದ ಕಲಿಕೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕು. ಎಲ್ಲ ವಿದ್ಯಾರ್ಥಿಗಳು ತಮ್ಮ ಅತ್ಯುತ್ತಮ ಪ್ರತಿಭೆಯನ್ನು ತೋರಿಸಿ ವಿಜೇತರಾಗಿ ಎಂದು ಶುಭ ಹಾರೈಸಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಡುಪಿ ಜಿಲ್ಲೆ ಇದರ ಉಪನಿರ್ದೇಶಕರಾದ ಮಾರುತಿ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಗ್ರಾಮಾಂತರ ಭಾಗದಲ್ಲಿ ಇಂತಹ ಶೈಕ್ಷಣಿಕ ಸಂಸ್ಥೆಯನ್ನು ಕಟ್ಟಿ ಅನೇಕ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿರುವುದು ಅದ್ಭುತ ಸಾಧನೆಯೇ ಸರಿ. ವಿದ್ಯಾರ್ಥಿಗಳು ಭಾರತದ ಮುಂದಿನ ಆಶಾಕಿರಣಗಳು, ಭವಿಷ್ಯತ್ತಿನಲ್ಲಿ ದೇಶವನ್ನು ಆಳುವವರು, ಆದುದರಿಂದ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು.
ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ಅವರು ಮಾತನಾಡಿ ಒಂದು ಉತ್ತಮ ಧ್ಯೇಯೋದ್ದೇಶವನ್ನು ಇಟ್ಟುಕೊಂಡು ಸಂಸ್ಥೆಯನ್ನು ಏಳು ಮಂದಿ ಸಮಾನ ಮನಸ್ಕರು ಸೇರಿ ಕಟ್ಟಿರುವೆವು. ಅದು ಇಂದು ಹೆಮ್ಮರವಾಗಿ ಬೆಳೆಯುವುದಕ್ಕೆ ಎಲ್ಲರೂ ಕಾರಣೀಕರ್ತರು ಎಂದು ತಮ್ಮ ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನು ಸ್ವಾಗತಿಸಿದರು.
ವೇದಿಕೆಯಲ್ಲಿ ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿಗಳಾದ ಮಮತಾ ದೇವಿ ಜಿ. ಎಸ್., ಉಪ ನಿರ್ದೇಶಕರಾದ ಮಾರುತಿ, ತಹಶೀಲ್ದಾರರಾದ ಪ್ರದೀಪ್ ಆರ್. ಹಿರ್ಗಾನ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುನೀತಾ ಪೂಜಾರಿ, ಸಂಸ್ಥೆಯ ಸಂಸ್ಥಾಪಕರುಗಳಾದ ವಿದ್ವಾನ್ ಗಣಪತಿ ಭಟ್, ಡಾ. ಗಣನಾಥ ಶೆಟ್ಟಿ, ಆದರ್ಶ ಎಂ.ಕೆ. ಹಾಗೂ ಗಣಪತಿ ಭಟ್ ಕೆ. ಎಸ್. ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜೀವಶಾಸ್ತ್ರ ವಿಭಾಗದ ಉಪನ್ಯಾಸಕರದ ಲೋಹಿತ್ ಅವರು ನಿರೂಪಿಸಿ, ವಂದಿಸಿದರು.
ಸಮಾರೋಪ ಸಮಾರಂಭವು ಅಪರಾಹ್ನ 3.00 ಗಂಟೆಗೆ ನೆರವೇರಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ವರ್ಗೀಸ್ ಪಿ. ಮಾತನಾಡಿ, ಜೀವನದ ಪ್ರತಿ ಹಂತದಲ್ಲೂ ನಾವು ತಿದ್ದಿಕೊಂಡು ಮುನ್ನಡೆಯಬೇಕು. ಸೋಲು ಗೆಲುವಿಗಿಂತ ನಾನು ಏನು ಕಲಿತೆ ಎಂಬುವುದು ಬಹುಮುಖ್ಯ ಎಂದು ತಿಳಿಸಿದರು.
ಉಡುಪಿ ಜಿಲ್ಲಾ ಅನುದಾನಿತ ಹಾಗೂ ಅನುದಾನ ರಹಿತ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ದಿನೇಶ್ ಎಂ. ಕೊಡವೂರು ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿದ ಕ್ರಿಯೇಟಿವ್ ಸಂಸ್ಥೆಯ ಎಲ್ಲ ಸಂಸ್ಥಾಪಕರುಗಳಿಗೆ ಅಭಿನಂದನೆಗಳನ್ನು ತಿಳಿಸುತ್ತಾ ವಿದ್ಯಾರ್ಥಿಗಳಿಗೆ ಶುಭನುಡಿಗಳನ್ನಾಡಿದರು.
ಸಹ ಸಂಸ್ಥಾಪಕರಲ್ಲಿ ಓರ್ವರಾದ ಅಶ್ವತ್ ಎಸ್.ಎಲ್. ಅವರು ಶಿಕ್ಷಣ ಕೇವಲ ತರಗತಿ ಕೋಣೆಯಲ್ಲಿ ಕಲಿಯುವ ವಿದ್ಯಾರ್ಜನೆಗೆ ಸೀಮಿತವಾಗಿರದೆ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಉನ್ನತೀಕರಿಸಿ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿ ಮುಂತಾದ ಎಲ್ಲಾ ವಿಚಾರಗಳನ್ನು ವಿದ್ಯಾರ್ಥಿ ಜೀವನದಲ್ಲಿ ರೂಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮೌಲ್ಯಯುತ ಬದುಕು ನಮ್ಮೆಲ್ಲರದ್ದಾಗಬೇಕು. ಎಚಿದು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಗಣ್ಯರನ್ನು ಸ್ವಾಗತಿಸಿದರು.
ವೇದಿಕೆಯಲ್ಲಿ ಉಪ ನಿರ್ದೇಶಕರಾದ ಮಾರುತಿ, ಉಡುಪಿ ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಸುಚೇತಾ, ಸಂಸ್ಥಾಪಕರುಗಳಾದ ಅಮೃತ್ ರೈ, ವಿಮಲ್ ರಾಜ್ ಜಿ. ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರಿಯಾಂಕ ನಿರೂಪಿಸಿ, ವಂದಿಸಿದರು. ವಿಜೇತ ವಿದ್ಯಾರ್ಥಿಗಳ ಪಟ್ಟಿಯನ್ನು ಕನ್ನಡ ಉಪನ್ಯಾಸಕ ಶಿವಕುಮಾರ್ ವಾಚಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಯಿತು.