ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲಾ ಮಟ್ಟದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಜನವರಿ 25 ರಂದು ನಗರದ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವು ಇದೆ ಜನವರಿ 25 ರಂದು ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.
ಖ್ಯಾತ ಉಪನ್ಯಾಸಕರಿಂದ ಮತದಾರರ ದಿನಾಚರಣೆ ಕುರಿತು ಉಪನ್ಯಾಸ ಸಹ ನಡೆಯಲಿದ್ದು, ಯುವ ಮತದಾರರಿಗೆ ಹೊಸ ಎಪಿಕ್ ಕಾರ್ಡ್ಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಗುವುದು ಎಂದ ಅವರು, ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವುದರೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮತದಾರರ ದಿನಾಚರಣೆ ಅಂಗವಾಗಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಣೆ ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಮತಗಟ್ಟೆ ಅಧಿಕಾರಿಗಳಿಗೆ, ಫ್ಲೈಯಿಂಗ್ ಸ್ಕ್ವಾಡ್‌ಗಳಿಗೆ, ಸೆಕ್ಟರ್ ಅಧಿಕಾರಿಗಳು ಹಾಗೂ ಇ.ಎಲ್.ಸಿ ಗಳಿಗೆ ಅಭಿನಂದನೆಯನ್ನು ಸಲ್ಲಿಸಲಾಗುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಎಎಸ್‌ಪಿ ಸಿದ್ಧಲಿಂಗಪ್ಪ, ಸಹಾಯಕ ಕಮಿಷನರ್ ಮಹೇಶ್ಚಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲ ಸಿ.ಕೆ, ಡಯಟ್ ನ ಹಿರಿಯ ಉಪನ್ಯಾಸಕ ಡಾ. ಅಶೋಕ್ ಕಾಮತ್, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.