ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಲೆಯ ವಿವಿಧ ಪ್ರಾಕಾರಗಳನ್ನು ಕಲಿಸುತ್ತಾ ಅವರ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಶ್ರಮಿಸುತ್ತಿರುವ ಸುರಭಿ ವಿದ್ಯಾರ್ಥಿಗಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಪುಣ್ಯದ ಕಾರ್ಯದಲ್ಲಿ ತೊಡಗಿದೆ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಸಂಸ್ಥೆಯ ಸುರಭಿ ಜೈಸಿರಿ ಹಾಗೂ ಬೆಳಿಹಬ್ಬದ ಸಂಭ್ರಮಾಚರಣೆಯ 5 ದಿನಗಳ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಕಲಾಸಂಸ್ಥೆಗಳನ್ನು ಮುನ್ನಡೆಸುವುದೇ ಸವಾಲಿನ ಕೆಲಸ. ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಗಮನಿಸಿದರೆ ಇಲ್ಲಿನ ಪದಾಧಿಕಾರಿಗಳ ಶ್ರಮ, ತಾಳ್ಮೆ ಹಾಗೂ ಸಮರ್ಪಣಾ ಭಾವ ಕಾಣುತ್ತದೆ ಎಂದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಅವರು ಡೋಲು ಭಾರಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬೈಂದೂರು ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟೀನ ಮ್ಯಾನೇಜಿಂಗ್ ಟ್ರಸ್ಟೀ ರಾಮಕೃಷ್ಣ ಶೇರುಗಾರ್ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಎಲ್.ಐ.ಸಿ ಬೈಂದೂರು ಶಾಖೆಯ ಅಭಿವೃದ್ಧಿ ಅಧಿಕಾರಿ ಸೋಮನಾಥನ್ ಆರ್., ರೋಟರಿ ಕ್ಲಬ್ ಬೈಂದೂರು ಅಧ್ಯಕ್ಷ ಮೋಹನ್ ರೇವಣ್ಕರ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಬೈಂದೂರು ತಾಲೂಕು ಗೌರವಾಧ್ಯಕ್ಷ ರಘುರಾಮ ಪೂಜಾರಿ, ಸುರಭಿ ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಉಪಸ್ಥಿತರಿದ್ದರು.


ಸುರಭಿಯ ಹಿರಿಯ ಹಿನ್ನೆಲೆ ಕಲಾವಿದ ಚಂದ್ರ ಬಂಕೇಶ್ವರ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಈ ವೇಳೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಹಾಗೂ ಸುರಭಿ ವ್ಯವಸ್ಥಾಪಕ ಕೃಷ್ಣಮೂರ್ತಿ ಉಡುಪ ಅವರನ್ನು ಸನ್ಮಾನಿಸಲಾಯಿತು. ನಾಟಕ ನಿರ್ದೇಶಕ ಗಣೇಶ್ ಮಂದರ್ತಿ, ಚಿತ್ರಕಲಾವಿದ ಗಿರೀಶ್ ಗಾಣಿಗ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.


ಸುರಭಿ ಬೈಂದೂರು ಅಧ್ಯಕ್ಷ ಆನಂದ ಮದ್ದೋಡಿ ಸ್ವಾಗತಿಸಿ, ನಿರ್ದೇಶಕ ಸುಧಾಕರ ಪಿ. ಬೈಂದೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘಟನಾ ಕಾರ್ಯದರ್ಶಿ ಸುಬ್ರಹ್ಮಣ್ಯ ಗಾಣಿಗ ವಂದಿಸಿದರು. ಉಪಾಧ್ಯಕ್ಷ ಅಬ್ದುಲ್ ರವೂಫ್ ಹಾಗೂ ಸದಸ್ಯ ಪ್ರಕಾಶ್ ಮಾಕೋಡಿ ಕಾರ್ಯಕ್ರಮ ನಿರೂಪಿಸಿದರು.



ಬಳಿಕ ಸುರಭಿ ನೃತ್ಯ ಕಲಾವಿದರಿಂದ ಯೋಗರಾಜ್ ಭಟ್ಕಳ ನಿರ್ದೇಶನದಲ್ಲಿ ನೃತ್ಯ ವೈವಿಧ್ಯ ಪ್ರದರ್ಶನ ಹಾಗೂ ಚಿತ್ರಕಲಾ ವಿದ್ಯಾರ್ಥಿಗಳಿಂದ ಗಿರೀಶ್ ಗಾಣಿಗ ನಿರ್ದೇಶನದಲ್ಲಿ ಕುಂಚ ಸಂಭ್ರಮ ಜರುಗಲಿದೆ.