ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಟೀಮ್ ಕುಂದಾಪುರದ ಪ್ರಸ್ತುತಿಯಲ್ಲಿ ಫೆಬ್ರವರಿ 12ರಿಂದ ಫೆಬ್ರವರಿ 16ರ ತನಕ ಕೋಡಿಯಲ್ಲಿ ಕುಂದ ಉತ್ಸವ-2025 ಐದು ದಿನಗಳ ಅದ್ದೂರಿಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಉದ್ಯಮಿ, ಕುಂದ ಉತ್ಸವದ ಸಾರಥ್ಯ ವಹಿಸಿರುವ ದಿನೇಶ ಹೆಗ್ಡೆ ಮೊಳಹಳ್ಳಿ ಹೇಳಿದರು.
ಅವರು ಕುಂದಾಪುರ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಫೆ.12 ಬುಧವಾರ ಬೆಳಿಗ್ಗೆ 8 ಗಂಟೆಯಿಂದ ಯೋಗ, ಬೀಚ್ ಸ್ವಚ್ಛತಾ ಕಾರ್ಯಕ್ರಮ, ಸಂಜೆ 7 ಗಂಟೆಯಿಂದ ಸಾಂಸ್ಕಂತಿಕ ಕಾರ್ಯಕ್ರಮ, 8 ಗಂಟೆಗೆ ಕುಂದ ಉತ್ಸವ ಉದ್ಘಾಟನೆ ನಡೆಯಲಿದೆ. ಬಳಿಕ ಶಿವಾನಿ ಮ್ಯೂಸಿಕಲ್ಸ್ ಇವರ ಸಂಯೋಜನೆಯಲ್ಲಿ ಝಿ ಕನ್ನಡ ಸರಿಗಮಪ ಖ್ಯಾತಿಯ ಕಲಾವಿದರಿಂದ ಸಂಗೀತ ಸಂಜೆ ನಡೆಯಲಿದೆ. ಫೆ.13ರಂದು ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ, ರಾಜ್ಯ ಮಟ್ಟದ ಡಾನ್ಸ್ ಸ್ಪರ್ಧೆ ನಡೆಯಲಿದೆ. ಫೆ.14ರಂದು ಸಂಜೆ 7 ಗಂಟೆಗೆ ಝಿ ಕನ್ನಡ ಡಿ.ಕೆ.ಡಿ ಖ್ಯಾತಿಯ ಶಿಪಾಲಿ ಪೂಜಾರಿ ಹಾಗೂ ಶಿವಾನಿ ಪೂಜಾರಿ ಇವರ ಭಾಗವಹಿಸುವಿಕೆಯಲ್ಲಿ ಸುಧೀರ್ ಉಳ್ಳಾಲ ನೇತೃತ್ವದ ರಾಜ್ಯದ ಹೆಸರಾಂತ ಸಿಟಿ ಗೈಸ್-ಕುಡ್ಲ ಕ್ವೀನ್ಸ್ ಇವರಿಂದ ಡ್ಯಾನ್ಸ್ ಧಮಾಕಾ ನಡೆಯಲಿದೆ. ರಾತ್ರಿ 8 ಗಂಟೆಗೆ ಸಭಾ ಕಾರ್ಯಕ್ರಮ, ರಾತ್ರಿ 9 ಗಂಟೆಗೆ ಅಂತರಾಷ್ಟ್ರೀಯ ಮಟ್ಟದ ಬೀಟ್-ಗುರುಸ್ ಇವರಿಂದ ಬೀಟ್ ಶೋ (ಇಂಡೋ-ಅರೇಬಿಯನ್-ಆಫ್ರಿಕನ್ ಜುಗಲ್‍ಬಂದಿ) ನಡೆಯಲಿದೆ.
ಫೆ.15ರಂದು ಸಂಜೆ 7 ಗಂಟೆಗೆ ಟೀಮ್ ಎಮ್.ಸಿ.ಎಸ್ ಇವರಿಂದ ಚಂಡೆ-ವಯೋಲಿನ್ ಫ್ಯೂಷನ್, ರಾತ್ರಿ 8 ಗಂಟೆಗೆ ಸಭಾ ಕಾರ್ಯಕ್ರಮ, ರಾತ್ರಿ 9 ಗಂಟೆಗೆ ಚಂದನ್ ಶೆಟ್ಟಿ ಮತ್ತು ತಂಡದವರಿಂದ ಮ್ಯೂಸಿಕಲ್ ನೈಟ್, ರಾತ್ರಿ 10 ಗಂಟೆಗೆ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಫೆ.16ರಂದು ಸಂಜೆ 4 ಗಂಟೆಗೆ ಗಾಳಿಪಟ ಉತ್ಸವ, ಸಂಜೆ 7 ಗಂಟೆಗೆ ಫ್ಲೈ_ಬೋರ್ಡ್ ನೈಟ್ ಶೋ, ರಾತ್ರಿ 8 ಗಂಟೆಗೆ ಸಭಾ ಕಾರ್ಯಕ್ರಮ, ರಾತ್ರಿ 10 ಗಂಟೆಯಿಂದ ಅನನ್ಯ ಭಟ್ ಮತ್ತು ತಂಡದವರಿಂದ ಲೈವ್ ಆರ್ಕೆಸ್ಟ್ರಾ ನಡೆಯಲಿದೆ. ವಿಶೇಷ ಆಹ್ವಾನಿತರಾಗಿ ಖ್ಯಾತ ನಿರೂಪಕಿ ಅನುಶ್ರೀ ಭಾಗವಹಿಸಲಿದ್ದಾರೆ ಎಂದರು.
ಫೆ. 15ರಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಗಮಿಸಲಿದ್ದಾರೆ. ಫೆ.16ರಂದು ಕಾರ್ಯಕ್ರಮಕ್ಕೆ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸುವ ಸಾಧ್ಯತೆ ಇದೆ. ಶಾಸಕರು, ಸಂಸದರು, ಬೇರೆ ಬೇರೆ ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಪ್ರವಾಸೋದ್ಯಮ ಸಚಿವರನ್ನು ಭೇಟಿ ಮಾಡಿದ್ದೇವೆ. ಕೋಡಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದರು.
ಕುಂದ ಉತ್ಸವದಲ್ಲಿ ಸುಮಾರು 150ಕ್ಕೂ ಹೆಚ್ಚು ವಿವಿಧ ಮಳಿಗೆಗಳು ಇರಲಿವೆ. ಸಂಗೀತ, ನೃತ್ಯದ ಜೊತೆಗೆ ಆಹಾರ ಮಳಿಗೆಗಳು, ಜಾಯ್ ರೈಡ್, ಮನೋರಂಜನಾ ಪಾರ್ಕ್ ಮೊದಲಾದವುಗಳು ಇರುತ್ತದೆ ಎಂದರು. ವಾಹನ ನಿಲುಗಡೆಗೆ ಚಕ್ರಮ ದೇವಸ್ಥಾನದ ಪರಿಸರ, ಬ್ಯಾರಿಸ್ ಕಾಲೇಜು ವಠಾರದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಸುದ್ಧಿಗೋಷ್ಟಿಯಲ್ಲಿ ಮುನಾಫ್ ಕೋಡಿ, ಮನ್ಸೂರ್ ಕೋಡಿ, ಹನೀಫ್ ಗುಲ್ವಾಡಿ, ನವೀನ ಪೂಜಾರಿ, ಪ್ರದೀಪ್, ಜಮಾನ್ ಗುಲ್ವಾಡಿ ಮೊದಲಾದವರು ಉಪಸ್ಥಿತರಿದ್ದರು.