ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿಗಳಲ್ಲಿ ಕಲಿಕೆಯ ಜೊತೆಯಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ವಿಜ್ಞಾನ ಮೇಳಗಳು ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳು ಬಾಲ್ಯದಿಂದಲೇ ವಿಜ್ಞಾನ, ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು, ಜೊತೆಯಲ್ಲಿ ಸಂಹವನ ಮಾಡುವ ಸಾಮಾರ್ಥ್ಯವೂ ಬರುತ್ತದೆ. ವಂಡ್ಸೆಯ ಸರಕಾರಿ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ವಿಜ್ಞಾನ ಮತ್ತು ಕಲಾ ಮೇಳ ಅತ್ಯಂತ ಯಶಸ್ವಿಯಾಗಿ ನಡೆಯುತ್ತದೆ. ಇದು ನಿರಂತರವಾಗಿ ನಡೆಯಲಿ ಎಂದು ಮೂಕಾಂಬಿಕಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಅಭಿಪ್ರಾಯಪಟ್ಟರು.
ಅವರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆಯಲ್ಲಿ ನಡೆದ ವಿಜ್ಞಾನ ಹಾಗೂ ಕಲಾ ಮೇಳವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಎಸ್.ಡಿ.ಎಂ.ಸಿ ಅಧ್ಯಕ್ಷೆ ಡಾ. ಪೂರ್ಣಿಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್, ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಅವಿನಾಶ್, ನಿವೃತ್ತ ಸರಕಾರಿ ಅಧಿಕಾರಿ ಬಿ. ಎನ್. ಶೆಟ್ಟಿ ಬಗ್ವಾಡಿ, ಮೂಕಾಂಬಿಕಾ ಚಾರಿಟೆಬಲ್ ಟ್ರಸ್ಟ್ ಕಾರ್ಯದರ್ಶಿ, ಗ್ರಾ.ಪಂ. ಸದಸ್ಯ ಉದಯಕುಮಾರ್ ಶೆಟ್ಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗೋವರ್ದನ್ ಜೋಗಿ, ಗ್ರಾಮ ಪಂಚಾಯತ್ ಸದಸ್ಯೆ ಶಶಿಕಲಾ ಎಸ್. ವಂಡ್ಸೆ, ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಕೋಶಾಧಿಕಾರಿ ಜಿ. ಶ್ರೀದರ ಶೆಟ್ಟಿ, ಟ್ರಸ್ಟಿ ಅನಂದ ಶೆಟ್ಟಿ ಸಬ್ಲಾಡಿ, ಉದ್ಯಮಿ ಸೀತಾರಾಮ ಶೆಟ್ಟಿ ತೊಂಭತ್ತು, ಶಿಕ್ಷಣ ಸಂಯೋಜಕರಾದ ಸತ್ಯನಾ ಕೊಡೇರಿ, ವಂಡ್ಸೆ ಕ್ಲಸ್ಟರ್ ಸಿ.ಆರ್.ಪಿ ನಾಗರಾಜ ಶೆಟ್ಟಿ, ಕರ್ಕುಂಜೆ ಕ್ಲಸ್ಟರ್ ಸಿ.ಆರ್.ಪಿ ರವಿಚಂದ್ರ, ನಿವೃತ್ತ ಶಿಕ್ಷಕರಾದ ಸಂತೋಷ್, ನಮ್ಮ ಭೂಮಿ ಸಂಸ್ಥೆಯ ಶ್ರೀನಿವಾಸ ಗಾಣಿಗ, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ರಾಜೀವ ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ವಿಜ್ಞಾನಗೀತೆ ಹಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ರಾಜು ಎನ್. ಸ್ವಾಗತಿಸಿದರು. ಶಿಕ್ಷಕ ಸುಧಾಕರ ಮರಕಾಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ವಾಣಿಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ನಾಗವೇಣಿ ವಂದಿಸಿದರು. ಶಿಕ್ಷಕರ ವೃಂದದವರು ಕಾರ್ಯಕ್ರಮಕ್ಕೆ ಸಹಕರಿಸಿದರು. ಶಿಕ್ಷಕ ಸೋಮರಾಯ ಜನ್ನು ಕಾರ್ಯಕ್ರಮ ವಿವರಣೆ ನೀಡಿದರು.

ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಎಲ್ಲಾ ವಿದ್ಯಾರ್ಥಿಗಳು ಸಿದ್ಧಪಡಿಸಿದ ಮಾದರಿಗಳನ್ನು ವೀಕ್ಷಿಸಿ ವಿವರಣೆ ಪಡೆದುಕೊಂಡು ವಿದ್ಯಾರ್ಥಿಗಳ ಬೆನ್ನುತಟ್ಟಿ ಪ್ರೋತ್ಸಾಹಿಸಿದರು. ಅತ್ಯಂತ ತಾಳ್ಮೆಯಿಂದ ವಿಜ್ಞಾನ ಮಾದರಿಗಳು, ಅದರ ಪರಿಣಾಮವನ್ನು ಕೇಳಿ ತಿಳಿದುಕೊಂಡರು. ವಿದ್ಯಾರ್ಥಿಗಳು ಉತ್ಸಾಹದಿಂದ ವಿವರಣೆ ನೀಡಿದರು.
ವಿಜ್ಞಾನ ಮೇಳದಲ್ಲಿ ಸುಮಾರು 150ಕ್ಕೂ ಹೆಚ್ಚು ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶನ ಮಾಡಿದರು. ರಕ್ತ ವರ್ಗೀಕರಣ, ಜಲಜಾಗೃತಿ, ರಾಸಾಯನಿಕ ಪ್ರಕ್ರಿಯೆ, ಸರಳ ವಿಜ್ಞಾನದ ಮಾದರಿಗಳು, ತಳವಿಲ್ಲದ ಬಾವಿ, ಉಪಗ್ರಹ ಉಡಾವಣೆ, ರಾಕೇಟ್, ಪೈಪ್ ಕೋವಿ, ಗೃಹ ಬಳಕೆಗೆ ಅಗತ್ಯವಿರುವ ಹೊಸ ಹೊಸ ಪ್ರಯೋಗ, ತುಂತುರು ನೀರಾವರಿ ವಿಧಾನ, ಜಲಶಕ್ತಿ, ಪವನ ಶಕ್ತಿ, ಶೋಧನೆಗಳನ್ನು ವಿದ್ಯಾರ್ಥಿಗಳು ಆವಿಸ್ಕರಿಸಿದ್ದರು. ಮರವಾಯಿ (ಕಪ್ಪೆಚಿಪ್ಪು) ಬಳಸಿ ಕಾರ್ಯಕ್ರಮದ ಫಲಕ ನಿರ್ಮಾಣ ಮಾಡಿದ್ದು ಗಮನ ಸಳೆಯಿತು. ಕಲಾ ಮೇಳದಲ್ಲಿ ಸುಮಾರು 300ಕ್ಕೂ ಹೆಚ್ಚು ಕಲಾಕೃತಿಗಳನ್ನು ವಿದ್ಯಾರ್ಥಿಗಳು ಸಿದ್ಧ ಪಡಿಸಿ ಪ್ರದರ್ಶನಕ್ಕಿಟ್ಟಿದ್ದರು. ಪೇಪರ್ ಕಟ್ಟಿಂಗ್ ಮೂಲಕ ಹೂವು, ಗೊಂಬೆ, ವಿವಿಧ ಆಕರ್ಷಕ ಆಕೃತಿಗಳು, ರಟ್ಟು, ಥರ್ಮೋಕೋಲ್ ಬಳಸಿ ಐಶಾರಾಮಿ ಮನೆ ಇತ್ಯಾದಿ ಮಾದರಿಗಳು, ತೆಂಗಿನ ತೆರಟೆ, ನಿರುಪಯೂಕ್ತ ವಸ್ತುಗಳಿಂದ ವಿವಿಧ ಆಕರ್ಷಕ ಅಲಂಕಾರಿಕ ವಸ್ತುಗಳನ್ನು ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ತಯಾರಿಸಿ ಪ್ರದರ್ಶನಕ್ಕಿಟ್ಟಿದ್ದರು.
ಬೇರೆ ಬೇರೆ ಶಾಲೆಗಳಿಂದ ವಿದ್ಯಾರ್ಥಿಗಳು:
ವಿಜ್ಞಾನ ಮತ್ತು ಕಲಾಮೇಳಕ್ಕೆ ಬೇರೆ ಬೇರೆ ಶಾಲೆಯ ವಿದ್ಯಾರ್ಥಿಗಳು ಆಗಮಿಸಿದರು. ಶಿಕ್ಷಕರುಗಳು ಭಾಗವಹಿಸಿದ್ದರು. ಸಾರ್ವಜನಿಕರು, ವಿದ್ಯಾರ್ಥಿ ಪೋಷಕರು ಆಗಮಿಸಿ ಮರಿ ವಿಜ್ಞಾನಿಗಳ ಆವಿಷ್ಕಾರಗಳನ್ನು ವೀಕ್ಷಿಸಿದರು. ಬೆಳಿಗ್ಗೆಯಿಂದ ಸಂಜೆಯ ತನಕ ವಿದ್ಯಾರ್ಥಿಗಳು ತಮ್ಮ ಮಾದರಿಗಳನ್ನು ಪ್ರದರ್ಶಿಸಿ ವಿವರಣೆ ನೀಡಿದರು. ವಿದ್ಯಾರ್ಥಿಗಳು ವಿಜ್ಞಾನ ಮಾದರಿಗಳ ಸಿದ್ಧ ಪಡಿಸುವುದರ ಜೊತೆಯಲ್ಲಿ ಅದನ್ನು ವೀಕ್ಷಕರ ಮುಂದೆ ವಿವರಿಸುವ ಕಲೆಯನ್ನು ತಿಳಿದುಕೊಂಡರು. ಇಂಥಹ ಮೇಳಗಳ ಆಶಯವೂ ಕೂಡಾ ಬಹುಮುಖಿಯಾಗಿದ್ದು ಪರಸ್ಪರ ಸಂವಹನಕ್ಕೆ ಹೆಚ್ಚು ಅವಕಾಶ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಸಂಹವನ ಬದುಕಿನುದ್ದಕ್ಕೂ ಸಹಕಾರಿಯಾಗುತ್ತದೆ.















