ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಬಸ್ರೂರು ಶ್ರೀ ಶಾರದಾ ಕಾಲೇಜಿನ ವಾಣಿಜ್ಯ ವಿಭಾಗ ಮತ್ತು ಐಕ್ಯೂಎಸಿ ಘಟಕದ ಸಂಯುಕ್ತ ಆಶ್ರಯದಲ್ಲಿ ಹೂಡಿಕೆ ಅರಿವು ಕಾರ್ಯಕ್ರಮವು ಕಾಲೇಜಿನ ವೀರ ರಾಜೇಂದ್ರ ಹೆಗ್ಡೆ ಸಭಾಂಗಣದಲ್ಲಿ ಜರುಗಿತು.
ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ, ನಿವೃತ್ತ ಪೈನಾನ್ಸ್ ಮ್ಯಾನೇಜರ್ ಆದ ಚಂದ್ರಶೇಖರ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಬಂಡವಾಳ ಹೂಡಿಕೆ ಮಾಡಿಕೊಳ್ಳುವ ಹಲವಾರು ಸಂಪನ್ಮೂಲ ಮಾರುಕಟ್ಟೆಯಲ್ಲಿವೆ. ಅವುಗಳಲ್ಲಿ ಯಾವ ಕಂಪನಿ ಉತ್ತಮ ಮತ್ತು ಸ್ವತಂತ್ರ ಕಂಪನಿ ಎಂಬುದನ್ನು ಹೂಡಿಕೆದಾರರು ಖಚಿತಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪ್ರಾಂಕ್ಲಿನ್ ಟೆಂಪಲ್ಟನ್ ಎಸೆಟ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಇದರ ಶಾಖೆಯ ಮ್ಯಾನೇಜರ್ ಆದ ಲಿಯೋ ಅಮಲ್ ಎ. ಅವರು ಹೂಡಿಕೆಯ ಬಗ್ಗೆ ಪ್ರತಿಯೊಬ್ಬರು ತಿಳಿಸಿಕೊಳ್ಳುವ ಅಗತ್ಯವಿದ್ದು ಹೂಡಿಕೆ ಮಾಡಲು ಅನುಸರಿಸಬೇಕಾದ ನೀತಿ ನಿಯಮಗಳ ಬಗ್ಗೆ ಮಾಹಿತಿ ಒದಗಿಸಿದರು.
ಕಾಲೇಜು ಪ್ರಾಂಶುಪಾಲರಾದ ಡಾ. ಚಂದ್ರಾವತಿ ಶೆಟ್ಟಿ ಅಧ್ಯಕ್ಷತೆ ನಿರ್ವಹಿಸಿದರು. ಐಕ್ಯೂಎಸಿ ಘಟಕ ಸಂಯೋಜಕರಾದ ಸಂದೀಪ ಕೆ. ಸ್ವಾಗತಿಸಿದರು. ಉಪನ್ಯಾಸಕಿ ಗೀತಾ ಕಾರ್ಯಕ್ರಮ ನಿರೂಪಿಸಿದರು. ಸಾರ್ವಜನಿಕ ಸಂಪರ್ಕ ಅಧಿಕಾರಿ ಹರೀಶ್ ಕಾಂಚನ್ ಧನ್ಯವಾದ ಗೈದರು.