ಕುಂದಾಪುರ: ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಈ ಸ್ಯಾಟಲೈಟ್ ಯುಗದ ಆಧುನಿಕ ಜೀವನದ ನಾಗಾಲೋಟದಲ್ಲಿ ತನ್ನತನವನ್ನು ಕಳೆದುಕೊಳ್ಳದೆ, ಸಂಸ್ಕಾರಯುಕ್ತ ಜೀವನ ಕ್ರಮ ರೂಢಿಸಿಕೊಳ್ಳುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿರಬೇಕು ಎಂದು ಜೇಸಿಐ ಪೂರ್ವ ವಲಯಾಧಿಕಾರಿ ಮಂಜುಳಾ ಪ್ರಸಾದ್ ಹೇಳಿದರು.
ಅವರು ಕುಂದಾಪುರ ಕೋಡಿ ಕಿನರಾ ಬೀಚ್‌ನ ಚಂದ್ರಕಾಂತ್ ಶೆಣೈ ರಿಸಾರ್ಟ್‌ನಲ್ಲಿ ನಡೆದ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ಕುಟುಂಬ ಸಮ್ಮಿಲನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಹಿಳೆ ಇಂದು ಪೋಷಕರಿಗೆ ಸನ್ನಡತೆಯ ಮಗಳಾಗಿ, ಗಂಡನಿಗೆ ಮನಮೆಚ್ಚಿದ ಮಡದಿಯಾಗಿ, ಮಕ್ಕಳಿಗೆ ಮಮತೆಯ ತಾಯಿಯಾಗಿ, ಸಮಾಜಕ್ಕೆ ಆದರ್ಶ ಮಹಿಳೆಯಾಗಿ ಬೆಳೆಯಲು ಸಂಸ್ಕಾರಯುಕ್ತ ಜೀವನ ಕ್ರಮ ರೂಢಿಸಿ ಕೊಂಡಲ್ಲಿ ಮಾತ್ರ ಸಾಧ್ಯ ಎಂದರು.
ರೋಟರಿ ಜೋನಲ್ ಲೆಫ್ಟಿನೆಂಟ್ ಗಜೇಂದ್ರ ಶೆಟ್ಟಿ ಮಾತನಾಡಿ, ರೋಟರಿಯಂತಹ ಸಮಾಜಮುಖಿ ಸಂಘಟನೆಯಲ್ಲಿ ಮಹಿಳೆಯರ ಉಪಸ್ಥಿತಿ ಮತ್ತು ಭಾಗವಹಿಸುವಿಕೆ ಅಗತ್ಯ ಎಂದರು. ರೋಟರಿ ವಲಯ ೧ರ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್ ಅವರು ರೋಟರಿ ಸನ್‌ರೈಸ್‌ನ ಮುಂದಿನ ಬೆಳವಣಿಗೆ ಬಗ್ಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕುಂದಾಪುರ ಸನ್‌ರೈಸ್ ಅಧ್ಯಕ್ಷರಾದ ದಿನಕರ ಪಟೇಲ್ ವಹಿಸಿ ಸ್ವಾಗತಿಸಿದರು. ಸಿದ್ಧಾಪುರದಲ್ಲಿ ಇತ್ತೀಚೆಗೆ ನಡೆದ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯ ಸಮೂಹ ನೃತ್ಯ, ಸಮೂಹ ಹಾಡುಕಾರಿಕೆ ಹಾಗೂ ಚಿತ್ರಕಲಾ ವಿಭಾಗದಲ್ಲಿ ಪ್ರಶಸ್ತಿ ಪಡೆದ ಸದಸ್ಯರನ್ನು ಅಭಿನಂದಿಸಲಾಯಿತು. ರೋಟರಿ ಕಾರ್ಯದರ್ಶಿ ಭೋಜರಾಜ್ ಜಿ.ವಿ. ಉಪಸ್ಥಿತರಿದ್ದರು. ಸಹಕಾರ್ಯದರ್ಶಿ ಸಿ.ಎಚ್. ಗಣೇಶ್ ವಂದಿಸಿದರು.