ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಮಗೆ ನಾವೇ ಸಾಧಕರು, ನಮಗೆ ನಾವೇ ಬೋಧಕರೂ ಆಗಬೇಕು. ಸಾಧನೆಗೆ ಇಂತಿಷ್ಟೇ ಅವಧಿ ಎಂಬುದಿಲ್ಲ. ಅದು ನಿರಂತರವಾಗಿ ನಡೆಯಬೇಕಾದ ನಿಜದ ಅನ್ವೇಷಣೆ. ಪ್ರಯತ್ನವು ಬದುಕನ್ನು ಬೆಳಕಿನ ದಾರಿಯಲ್ಲಿ ಕೊಂಡೊಯ್ಯುವ ನಂದಾದೀಪ. ಪದವಿ ಶಿಕ್ಷಣದಲ್ಲಿ ವಿದ್ಯೆ ಮತ್ತು ಕೌಶಲ್ಯದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪೂರ್ವಸಿದ್ಧತೆ ಮಾಡಿಕೊಂಡು ಸತತ ಪ್ರಯತ್ನದಲ್ಲಿ ನಂಬಿಕೆ ಇಟ್ಟರೆ ಭವಿಷ್ಯ ಉಜ್ವಲವಾಗುತ್ತದೆಂದು ತೆಂಕನಿಡಿಯೂರು ಸ.ಪ್ರ.ದ. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರಶಾಂತ ನೀಲಾವರ ನುಡಿದರು.
ಅವರು ಇಲ್ಲಿನ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ, ಅಂಚೆ ಕೋಟೇಶ್ವರ ಇಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನವನ್ನು ಎದುರಿಸುವ ಕಲೆ ಎಂಬ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಾಹೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ. ಪ್ರವೀಣ ಶೆಟ್ಟಿ ಸಂದರ್ಶನವನ್ನು ಎದುರಿಸುವ ಕಲೆ ಎಂಬ ವಿಷಯದ ಕುರಿತು ಮಾತನಾಡುತ್ತ ಜ್ಞಾನ, ಕೌಶಲ್ಯ ಸಂಪಾದನೆಯೊಂದಿಗೆ ಕೀಳರಿಮೆಯಿಂದ ಹೊರಬಂದು ಆತ್ಮವಿಶ್ವಾಸದಿಂದ ಸಂದರ್ಶನವನ್ನು ಎದುರಿಸಲು ಅಗತ್ಯವಾದ ತರಬೇತಿ ನಿಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಯಶಸ್ಸೆಂಬ ಬೆಳದಿಂಗಳು ಬೇಕಾದರೆ ಪ್ರಯತ್ನವೆಂಬ ಅಖಂಡ ಚಂದ್ರ ಸದಾ ಬೆಳಗುತ್ತಿರಬೇಕು. ಕಾಲೇಜು ಜೀವನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನ ಎದುರಿಸುವ ಕಲೆಯನ್ನು ಕರಗತ ಮಾಡಿಕೊಂಡು ಸುಂದರ ನಾಳೆಗಳನ್ನು ನಿರ್ಮಿಸಿಕೊಳ್ಳಬೇಕೆಂದು ಕರೆ ನೀಡಿದರು.
ಐಕ್ಯೂಎಸಿ ಸಂಚಾಲಕರಾದ ನಾಗರಾಜ ಯು., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ., ಕಾರ್ತಿಕ್ ಪೈ, ವಿದ್ಯಾರ್ಥಿ ಪ್ರತಿನಿಧಿಗಳಾದ ಅಂತಿಮ ಬಿ.ಕಾಂ.ನ ಅಂಕಿತಾ ಮತ್ತು ಶಶಾಂಕ ಒ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಂತಿಮ ಬಿ.ಕಾಂ. ವಿದ್ಯಾರ್ಥಿನಿ ಅಂಕಿತಾ ನಿರೂಪಿಸಿ, ಉದ್ಯೋಗ ಮಾರ್ಗದರ್ಶನ ಮತ್ತು ಸ್ಥಾನೀಕರಣ ಘಟಕದ ಸಂಚಾಲಕರಾದ ಮನೋಹರ್ ಬಿ. ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕರಾದ ರಂಜಿತ್ ವಂದಿಸಿದರು.















