ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ರೈಲ್ವೆ ಓವರ್ ಬ್ರಿಜ್ ಬಳಿ ನಡೆದ ಅಪಘಾತದಲ್ಲಿ ಟ್ರಾಕ್ ಮೆನ್ ಆಗಿ ಸೇವೆ ಸಲ್ಲಿಸುತ್ತಿದ್ದ ಬಿಜೂರು ಗ್ರಾಮದ ಆನಂದ ಪೂಜಾರಿ (43) ಅವರ ತಲೆಗೆ ಗಂಭೀರ ಗಾಯವಾಗಿ ಮೆದುಳು ನಿಷ್ಕ್ರೀಯಗೊಂಡು ಮೃತಪಟ್ಟ ಖೇದಕರ ಘಟನೆ ನಡೆದಿದೆ.
ಮೂಡ್ಲಕಟ್ಟೆ ಕೊಂಕಣ್ ರೈಲ್ವೆ ಓವರ್ ಬ್ರಿಜ್ ಬಳಿಯಲ್ಲಿ ಹೈಟ್ ಗೇಜ್ ದುರಸ್ತಿ ನಡೆಯುತ್ತಿದ್ದ ಸಂದರ್ಭ, ಸೋಮವಾರ ಕರ್ತವ್ಯದಲ್ಲಿದ್ದ ಆನಂದ ಪೂಜಾರಿ ಅವರ ತಲೆಗೆ ಹೈಟ್ ಗೇಜ್‌ನ ಕಂಬಿ ತಾಕಿ ಕೆಳಕ್ಕೆ ಬಿದ್ದದ್ದರಿಂದ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರೀಕ್ಷಿಸಿದ ವೈದ್ಯರು ಆನಂದ ಪೂಜಾರಿ ಅವರ ಮೆದುಳು ನಿಷ್ಕ್ರೀಯಗೊಂಡಿರುವ ಬಗ್ಗೆ ತಿಳಿಸಿದ್ದರು. ಎರಡು ದಿನದ ಬಳಿಕ ಅವರು ಸಾವನ್ನಪ್ಪಿರುವುದನ್ನು ದೃಢಪಡಿಸಿದ್ದಾರೆ.
ಜನಾನುರಾಗಿ ಯುವಕ:
ಬೈಂದೂರು ಬಿಲ್ಲವ ಸಂಘಟನೆ, ನಾರಾಯಣಗುರು ಕಲಾ ಮತ್ತು ಕ್ರೀಡಾ ಸಂಘ ಬಿಜೂರು, ಫ್ರೆಂಡ್ಸ್ ಕ್ಲಬ್ ಉಪ್ಪುಂದ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದ ಆನಂದ ಪೂಜಾರಿ ಅವರು ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದರು. ವಾಲಿಬಾಲ್, ಕ್ರಿಕೆಟ್ ಆಟಗಾರರಾಗಿದ್ದ ಅವರು ವಿವಿಧ ಸಂಘಟನೆಗಳ ಮೂಲಕ ಕ್ರೀಡಾಕೂಟಗಳನ್ನು ಆಯೋಜಿಸಿದ್ದರು. ಬಿಜೂರು ಉಪ್ಪುಂದದಲ್ಲಿ ಅಪಾರ ಸ್ನೇಹಿತರ ಬಳಗವನ್ನು ಹೊಂದಿದ್ದರು.
ವಿಧಿಯಾಟ:
ಆನಂದ ಪೂಜಾರಿ ಅವರು ಕೊಂಕಣ್ ರೈಲ್ವೆಯಲ್ಲಿ ಹತ್ತು ವರ್ಷಗಳಿಂದ ಟ್ರಾಕ್ ಮೆನ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅದಕ್ಕೂ ಮೊದಲು ಬೈಂದೂರು ಸಾಗರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ನೌಕರರಾಗಿ ಸೇವೆ ಸಲ್ಲಿಸಿದ್ದರು. ಎಪ್ರಿಲ್ ಎರಡನೇ ವಾರದಲ್ಲಿ ಅವರು ಯಡ್ತರೆ ಗ್ರಾಮದಲ್ಲಿ ನಿರ್ಮಿಸಿದ ನೂತನ ಗೃಹದ ಪ್ರವೇಶೋತ್ಸವ ನಡೆಯುವುದಿತ್ತು. ಆದರೆ ಅಷ್ಟರಲ್ಲೇ ಈ ದುಃಖಕರ ಸನ್ನಿವೇಶ ಕುಟುಂಬಕ್ಕೆ ಎದುರಾಗಿದೆ. ಅವರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ನಿ ನಾಗಶ್ರೀ, ಇಬ್ಬರು ಮಕ್ಕಳು ಹಾಗೂ ಕುಟುಂಬಿಕರನ್ನು ಅಗಲಿದ್ದಾರೆ.
Latest Update on 03 March 2025
ಸಾವಿನಲ್ಲೂ ಸಾರ್ಥಕತೆ, ಅಂತಿಮ ನಮನ:
ಮೃತ ಆನಂದ ಪೂಜಾರಿ ಅವರ ನೇತ್ರಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲಿ ಸಾರ್ಥಕತೆ ಮೆರೆಯಲಾಗಿದೆ. ಗುರುವಾರ ಬೆಳಿಗ್ಗೆ ಬಿಜೂರಿನಲ್ಲಿ ಅವರ ಪತ್ನಿ ನಾಗಶ್ರೀ ಅವರ ನಿವಾಸ, ಬಳಿಕ ಆನಂದ ಪೂಜಾರಿ ಅವರ ನಿವಾಸದಲ್ಲಿ ಮೃತದೇಹವನ್ನು ಇರಿಸಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಮಂದಿ ಈ ವೇಳೆ ತೆರಳಿ ಅಂತಿಮ ನಮನ ಸಲ್ಲಿಸಿದರು. ಬಳಿಕ ಅವರ ಮನೆಯ ಸಮೀಪವೇ ಅಂತಿಮ ಕ್ರಿಯಾ ವಿಧಿಗಳನ್ನು ನೆರವೇರಿಸಲಾಯಿತು.