ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಂದಿನ ಆಧುನಿಕ ವೇಗದ ಬದುಕಿನ ಭರಾಟೆಯಲ್ಲಿ ತಲ-ತಲಾಂತರಗಳಿಂದ ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬಂಧಗಳನ್ನು ಹೊಂದಿ ಜೀವನವನ್ನು ಶ್ರೀಮಂತಗೊಳಿಸಿದ ಮೌಖಿಕ ಪರಂಪರೆಯಾದ ಅಮೂಲ್ಯ ಜಾನಪದ ಸಂಸ್ಕೃತಿಯನ್ನು ಇಂದಿನ ಯುವ ಪೀಳಿಗೆ ರಕ್ಷಿಸಬೇಕಾದ ತುರ್ತು ಅಗತ್ಯವಿದೆ ಎಂದು ಕಲಾ ಚಿಗುರು ಕಲಾ ತಂಡದ ಚೇತನ್ ನೈಲಾಡಿ ಹೇಳಿದರು.
ಅವರು ಇಲ್ಲಿನ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ, ಅಂಚೆ ಕೋಟೇಶ್ವರ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ಸಾಂಸ್ಕೃತಿಕ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಜಾನಪದ ಉತ್ಸವ 2025, ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾನಪದ ಎಂಬುದು ಒಂದು ಸಂಪ್ರದಾಯ, ಪರಂಪರೆಗಳ ವಿಜ್ಞಾನ ಎಂದು ಪರಿಭಾವಿಸಬೇಕಾದ ಅವಶ್ಯಕತೆಯಿದೆ. ವಿದ್ಯಾರ್ಥಿಗಳು ವಿದ್ಯೆ ಕಲಿಕೆಯೊಂದಿಗೆ ಸನಾತನ ಸಂಸ್ಕೃತಿಯ ಜೀವನದ ಶೈಲಿಯನ್ನು ರೂಢಿಸಿಕೊಂಡು ಮುಂದಿನ ತಲೆಮಾರಿಗೆ ಅದನ್ನು ವರ್ಗಾಯಿಸುವ ಗುರುತರ ಹೊಣೆಗಾರಿಕೆಯನ್ನು ಹೊಂದಬೇಕಾಗಿದೆ ಎಂದರು.
ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಅಧ್ಯಕ್ಷತೆ ವಹಿಸಿದ್ಧರು. ಐಕ್ಯೂಎಸಿ ಸಂಚಾಲಕ ನಾಗರಾಜ ಯು., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ., ವಿದ್ಯಾರ್ಥಿ ನಾಯಕರುಗಳಾದ ನಿತಿನ್ ಮತ್ತು ತಿಲಕ ಎಂ.ಎಂ. ಹಾಗೂ ಬೋಧಕ-ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.
ನಾಗರಾಜ ವೈದ್ಯ ಎಂ. ಅವರು ಅತಿಥಿ ಪರಿಚಯ ಮಾಡಿದರು. ವಿದ್ಯಾರ್ಥಿನಿ ಕಾವ್ಯ ಮತ್ತು ತಂಡದವರು ಪ್ರಾರ್ಥಿಸಿದರು. ಸ್ವರ್ಣಿತಾ ನಿರೂಪಿಸಿ, ಸಾಂಸ್ಕೃತಿಕ ವೇದಿಕೆಯ ಸಂಚಾಲಕರಾದ ಡಾ. ಭಾಗೀರಥಿ ನಾಯ್ಕ ಸ್ವಾಗತಿಸಿ, ಸಾಂಸ್ಕೃತಿಕ ಪ್ರತಿನಿಧಿಗಳಾದ ವಿಶ್ವನಾಥ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಜನಪದ ಸಾಹಿತ್ಯ, ಕಲೆ, ಭಾಷೆ, ಪಾರಂಪರಿಕ ಕರಕುಶಲ ವಸ್ತುಗಳ ಪ್ರದರ್ಶನ, ದೇಶೀಯ ಪಾಕ ಪದ್ಧತಿ ಪ್ರದರ್ಶನ, ಜಾನಪದ ಗೀತೆ ಸ್ಪರ್ಧೆಗಳು, ಸಂಗೀತ, ನೃತ್ಯ, ಆಟದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು.