ಮೂಡುಬಿದಿರೆ: ಬೆಳಿಗ್ಗೆ 5:30ರ ಉದಯರಾಗದಿಂದ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿ ರಾತ್ರಿ 11:30ಕ್ಕೆ ರಘು ದೀಕ್ಷಿತ್ ಅವರ ಸಮಕಾಲೀನ ಜನಪದ ಸಂಗೀತದ ಮೂಲಕ ಸಮಾಪನಗೊಂಡಿತು. ಡಾ| ವಿ. ಎಸ್. ಆಚಾರ್ಯ ಸಭಾಭವನದಲ್ಲಿ ಪಂಡಿತ್ ಅಂಬಯ್ಯನುಲಿ ಮತ್ತು ಬಳಗದಿಂದ ಉದಯರಾಗ, ಬ್ರಹ್ಮಾವರ ರಘುನಾಥ ಭಟ್ ಮತ್ತು ಬಳಗದಿಂದ ಲಘು ಶಾಸ್ತ್ರೀಯ ಸಂಗೀತ, ಮೈಸೂರು ಮೈತ್ರಿರಾವ್ ಅವರಿಂದ ಭರತನಾಟ್ಯ, ಸಿ. ಎಂ. ನರಸಿಂಹಮೂರ್ತಿ ಮತ್ತು ಬಳಗದಿಂದ ಜಾನಪದ ಝೇಂಕಾರ, ಶೋಭಾ ಶಶಿಕುಮಾರ್ ಬಳಗದ ಭರತನಾಟ್ಯ, ತಾಳಮದ್ದಳೆ, ನೃತ್ಯರೂಪಕಗಳು ಪ್ರದರ್ಶನಗೊಂಡರೇ, ರತ್ನಾಕರವರ್ಣಿ ವೇದಿಕೆಯಲ್ಲಿ ದಾಸರಪದಗಳು, ನೃತ್ಯ ವೈವಿಧ್ಯಗಳು ಜರುಗಿದವು, ಕೆ. ವಿ. ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ಜನಪದ ಗಾಯನ, ಸುಗಮ ಸಂಗೀತ ಜರುಗಿದರೇ, ಶ್ರೀಮತಿ ಜಯಲಕ್ಷ್ಮೀ ಆಳ್ವ ವೇದಿಕೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಗಾಯನ, ಮ್ಯಾಂಡೋಲಿನ್ ವಾದನ ಜರುಗಿತು,
ಬಿ.ವಿ ಕಾರಂತ ವೇದಿಕೆಯಲ್ಲಿ ಸಾಹಿತಿ ಜಯಂತ ಕಾಯ್ಕಿಣಿ ರಚನೆಯ, ಹಲುಗಪ್ಪ ಕಟ್ಟೀಮನಿ ನಿರ್ದೇಶನದ ಜತೆಗಿರುವನು ಚಂದಿರ ನಾಟಕವು ಸಂಕಲ್ಪ ಮೈಸೂರು ಹಾಗೂ ಕಾರಾಗೃಹ ಇಲಾಖೆ ಬೆಂಗಳೂರು ಕಲಾವಿದರಿಂದ ಪ್ರದರ್ಶನಗೊಂಡಿತು. ಕೆ.ಎನ್. ಟೈಲರ್ ವೇದಿಕೆಯಲ್ಲಿ ಮಿಮಿಕ್ರಿ ದಯಾನಂದ ಹಾಸ್ಯ ರಸಾಯನ, ಕು. ಇಂದುಶ್ರೀ ಅವರ ಮಾತನಾಡುವ ಗೊಂಬೆ, ಉಮೇಶ್ ಮಿಜಾರು ಮತ್ತು ತಂಡದಿಂದ ತುಳು ಹಾಸ್ಯ ಕಾರ್ಯಕ್ರಮ ಜರುಗಿದರೇ, ಕು.ಶಿ ಹರಿದಾಸ್ ಭಟ್ ವೇದಿಕೆಯಲ್ಲಿ ನೃತ್ಯ ರೂಪಕ, ನೃತ್ಯ ಕಲಾರ್ಪಣಂ ಜರುಗಿತು.