ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಒಂದು ಕಡೆಯಲ್ಲಿ ಬೆಳೆದ ಕೃಷಿಗೆ ಬೆಲೆಯಿಲ್ಲಾ, ಸೂಕ್ತ ಮಾರುಕಟ್ಟೆಯಿಲ್ಲಾ, ಮಧ್ಯವರ್ತಿಗಳ ಹಾವಳಿ, ಕಾಡುಪ್ರಾಣಿಗಳ ಹಾವಳಿ, ಆಗಾಗ ಕೈಕೊಡುವ ಮಳೆಗಾಲ, ವಿಪರೀತ ಬೇಸಗೆ, ಕೃಷಿ ಕೂಲಿ ಕಾರ್ಮಿಕರ ಕೊರತೆ, ಕೃಷಿ ಯಂತ್ರೋಪಕರಣಗಳ ಗಗನಕ್ಕೆರಿದ ಬಾಡಿಗೆ ಇತ್ಯಾದಿಗಳಿಂದ ಕಂಗೆಟ್ಟು ಹೋಗಿರುವ ರೈತರಿಗೆ ಇದೆಲ್ಲವುದರ ಜೊತೆ ಅತೀವ ತೊಂದರೆ ಕೊಡುತ್ತಿರುವ ಇನ್ನೊಂದು ಅಂದರೆ ಮಂಗಗಳ ಹಾವಳಿ. ಇವತ್ತು ಮಂಗಗಳು ಕಾಡಿನಲ್ಲಿ ವಾಸಿಸುವುದನ್ನೇ ಮರೆತು ಮನುಷ್ಯನ ಜೊತೆ ಅವುಗಳ ಚೇಷ್ಟೆಯೊಂದಿಗೆ ವಾಸ ಮಾಡುತ್ತಿರುವುದು ರೈತರ ನಿದ್ದೆಯನ್ನು ಕೆಡಿಸಿಬಿಟ್ಟಿದೆ ಎಂದು ಕುಂದಾಪುರದ ರೈತ ಮುಖಂಡ ಕೆ. ವಿಕಾಸ್ ಹೆಗ್ಡೆ ಹೇಳಿದರು.
ಆಳುವ ಸರ್ಕಾರಗಳು ಮಂಕಿ ಪಾರ್ಕ್ ಮಾಡುತ್ತೇವೆ, ಮಂಗಗಳ ತೊಂದರೆ ಹತೋಟಿಗೆ ತರಲು ಈಶಾನ್ಯ ರಾಜ್ಯಗಳ ಕೈಗೊಂಡಿರುವ ಕ್ರಮಕೈಗೊಳ್ಳುತ್ತೇವೆ ಅನ್ನುತ್ತಿವೆ ಬಿಟ್ಟರೆ ತೆಗೆದುಕೊಂಡ ಕ್ರಮಗಳು ಮಾತ್ರ ಶೂನ್ಯ. ಅದರ ಜೊತೆ ಮಾನವರು ತಮ್ಮ ಸ್ವಾರ್ಥಕ್ಕೆ ಕಾಡನ್ನು ನಾಶ ಮಾಡಿ ಕಾಡುಪ್ರಾಣಿಗಳ ಆಹಾರ ನೀಡುತ್ತಿದ್ದ ಮರಗಳನ್ನು ನಾಶ ಮಾಡಿರುವುದು ಈ ಸಮಸ್ಯೆಗಳಿಗೆ ದೊಡ್ಡ ಕಾರಣ. ಹಿಂದೆ ಹೆಚ್ಚಿನ ಕೃಷಿ ಪ್ರಧಾನ ಕುಟುಂಬಗಳಲ್ಲಿ ಕಾಡಿಗೆ ತಾಗಿಕೊಂಡು ಮಂಗನ ಮಕ್ಕಿ ಎನ್ನುವ ಒಂದು ಗದ್ದೆ ಇರುತ್ತಿತ್ತು ಅದು ಕಾಡು ದಾಟಿ ನಾಡಿಗೆ ಬರುವ ಮಂಗಗಳಿಗೆ ತಿನ್ನಲು ಆಹಾರ ನೀಡುತ್ತಿದ್ದ ಗದ್ದೆ.
ಇವತ್ತು ಮನುಷ್ಯನ ಸ್ವಾರ್ಥ ಇಂತಾ ಗದ್ದೆಗಳನ್ನು ಸಹ ರಿಯಲ್ ಎಸ್ಟೇಟ್ ಎನ್ನುವ ಹೆಸರಿನಲ್ಲಿ ಮಾರಾಟ ಮಾಡಿ ಮಂಗಳಿಗೆ ಕಾಡಲ್ಲಿ ನಾಡಲ್ಲಿ ಆಹಾರ ಸಿಗದಂತೆ ಮಾಡಿದ್ದೇ ಇವತ್ತು ಮಂಗಗಳು ರೈತನಿಗೆ ವಿಪರೀತ ತೊಂದರೆ ಕೊಡಲು ಕಾರಣ. ಸರ್ಕಾರ ಹಾರಿಕೆಯ ಉತ್ತರ ನೀಡುವ ಬದಲು ಮಂಗಗಳ ಹಾವಳಿಯನ್ನು ತಪ್ಪಿಸಲು ಪ್ರಾಮಾಣಿಕ ಕ್ರಮಕೈಗೊಳ್ಳಬೇಕು ಹಾಗೂ ರೈತರು ಕಾಡು ನಾಶ ಮಾಡುವುದನ್ನು ಬಿಟ್ಟು ಕಾಡು ಪ್ರಾಣಿಗಳಿಗೆ ಅಗತ್ಯವಾದ ಆಹಾರ ನೀಡುವ ಮರಗಿಡಗಳನ್ನು ನೆಡಬೇಕು ಎಂದು ಪತ್ರಿಕಾ ಹೇಳಿಕೆಯ ಮೂಲಕ ಅವರು ಆಗೃಹಿಸಿದ್ದಾರೆ.