ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ ಅವರು ಪೊಲೀಸ್ ಇಲಾಖೆ ಕರ್ತವ್ಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ಬಿಟ್ಟು ಅವರ ಕರ್ತವ್ಯವಾದ ಹೆದ್ದಾರಿ ಸಮಸ್ಯೆ, ಕಸ್ತೂರಿ ರಂಗನ್ ವರದಿ ಸಮಸ್ಯೆ, ಪರಿಸರ ಸೂಕ್ಷ್ಮ ವಲಯದ ಸಮಸ್ಯೆ, ರೈಲ್ವೆ ಸಮಸ್ಯೆ, ಕರಾವಳಿ ನಿಯಂತ್ರಣ ವಲಯದ ಸಮಸ್ಯೆ, ಯುವಕರ ನಿರುದ್ಯೋಗ ಸಮಸ್ಯೆ, ಬಂದರು ಸಮಸ್ಯೆ, ಪ್ರವಾಸೋದ್ಯಮಕ್ಕೆ ಇರುವ ಅಡೆತಡೆಗಳು ಇವುಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿ. ಅದನ್ನು ಬಿಟ್ಟು ಇವರೇ ಅಂದರೆ ಶಾಸಕಾಂಗ ರಚನೆ ಮಾಡಿದ ಕಾನೂನುಗಳನ್ನು ಪೊಲೀಸ್ ಇಲಾಖೆ ಕರ್ತವ್ಯ ಪಾಲನೆ ಮಾಡುವಾಗ ಅದನ್ನು ವಿರೋಧಿಸುವುದು ಹಾಗೂ ಟೀಕಿಸುವುದು ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಹೇಳಿದರು.
ಇವತ್ತು ಪೊಲೀಸ್ ಇಲಾಖೆ ಕಾನೂನಿನ ಅಡಿಯಲ್ಲಿ ಸಮಾಜ ಘಾತುಕ ಶಕ್ತಿಗಳ ಮೇಲೆ ಗಡಿಪಾರು, ಬಂಧನ ಇತ್ಯಾದಿ ಕ್ರಮವನ್ನು ಕಾನೂನಿನ ಅಡಿಯಲ್ಲೇ ಜಾರಿಗೆ ತರುತ್ತಿದೆ ಬಿಟ್ಟರೆ ಪೊಲೀಸ್ ಇಲಾಖೆ ಕಾನೂನು ಬಿಟ್ಟು ಯಾವುದನ್ನೂ ಮಾಡುತ್ತಿಲ್ಲಾ, ಅದಲ್ಲದೆ ಮಾನ್ಯ ಸಂಸದರು ಪೊಲೀಸ್ ರ ಕ್ರಮವನ್ನು ಟೀಕಿಸುವಾಗ ಇದಕ್ಕೆ ಧರ್ಮದ ಬಣ್ಣ ತರುವುದು ಕೂಡ ಇದರಲ್ಲಿ ಇವರ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸವಾಗಿದೆ.
ಸಂಸದರು ಒಂದು ವಿಚಾರ ತಿಳಿದುಕೊಳ್ಳಬೇಕು ಹಿಂದೂ ಧರ್ಮವನ್ನು ಬಿಜೆಪಿ ಗುತ್ತಿಗೆ ಪಡೆದಿಲ್ಲಾ, ನಿಮ್ಮ ರಾಜಕೀಯ ಲಾಭಕ್ಕಾಗಿ ಧರ್ಮ ಹಾಗೂ ರಾಜಕೀಯವನ್ನು ಬೆರೆಸಿ ಸಮಾಜದ ಸ್ವಾಸ್ತ್ಯ ಹಾಳು ಮಾಡುವ ಕೆಲಸ ಮಾಡಬಾರದು ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.










