ಕುಂದಾಪುರ: ಸಮೀಪದ ಮಾವಿನ ಕಟ್ಟೆ ಗ್ರಾಮದಲ್ಲಿ ಬೆಳ್ಳಂಬೆಳ್ಳಗೆ ಚಿರತೆಯೊಂದು ಗೋಚರಿಸಿ ಗ್ರಾಮಸ್ಥರು ಆತಂಕ್ಕೀಡಾಗಿರುವ ಘಟನೆ ಜರಗಿದೆ. ಕಳೆದ ಕೆಲವು ದಿನಗಳಿಂದಲೂ ಪರಿಸರ ಬೀದಿ ನಾಯಿಗಳು ವಿಕರವಾಗಿ ಅರಚುತ್ತಾ ಅತ್ತಿತ್ತ ಒಡಾಡುತ್ತಿದ್ದರೂ ಅದರ ಬಗ್ಗೆ ಹಚ್ಚೇನು ಗಮನ ಹರಿಸದಿದ್ದ ಗ್ರಾಮಸ್ಥರು ಇಂದು ಮಾತ್ರ ಚಿರತೆ ದರ್ಶನದಿಂದ ಬೆಚ್ಚಿ ಬಿದ್ದಿದ್ದಾರೆ. ಸ್ಥಳಿಯ ಮಸೀದಿಯ ಧರ್ಮಗುರುಗಳು ಇಂದು ಬೆಳಿಗ್ಗೆ ನಮಾಝ್ ನಿರ್ವಹಿಸಲು ಮಸೀದಿಯತ್ತ ತೆರಳುತ್ತಿದ್ದಾಗ, ರಸ್ತೆಯ ಪಕ್ಕದಲ್ಲಿ ನಾಯಿಗಳು ಗುಂಪಾಗಿ ಬೊಗಳುತ್ತಿರುವುದನ್ನು ಗಮನಿಸಿ ಅತ್ತ ಟಾರ್ಚಿನ ಬೆಳಕನ್ನು ಹಾಯಿಸಿದ್ದರು. ಟಾರ್ಚಿನ ಬೆಳಕಿನಲ್ಲಿ ಪೊದೆಯೊಂದರಲ್ಲಿ ಅವಿತು ಕುಳಿತು ಗುರುಗುಡುತ್ತಿದ್ದ ಆಳೆತ್ತರದ ಚಿರತೆಯ ದರ್ಶನ ವಾಗುತ್ತಲೇ ಬೆದರಿ ಹೋದ ಧರ್ಮಗುರುಗಳು ಅಲ್ಲಿಂದ ಲಗುಬಗೆಯಿಂದ ಮಸೀದಿಗೆ ತೆರಳಿ ಚಿರತೆ ಅವಿತು ಕೊಂಡಿರುವ ವಿಚಾರವನ್ನು ಹೇಳಿದ್ದರು. ಅದಾಗಲೇ ಹಲವರು ಒಟ್ಟು ಕೂಡಿ ಬಂದು ನೋಡಿದಾಗ ಚಿರತೆಯು ಪಕ್ಕದ ಹಾಡಿಯೊಳಗೆ ಒಡಿ ಹೋಗಿದ್ದು ಹಿಂಬಾಲಿಸಿದ ನಾಯಿಗಳು ಅಲ್ಲಿಯೂ ಆರ್ಭಟಿಸುತ್ತಿರುವ ದೃಶ್ಯ ಕಂಡು ಬಂದಿತ್ತೆನ್ನಲಾಗಿದೆ.
ಚಿರತೆ ಗೋಚರವಾಗಿರುವ ವಿಚಾರ ಇದೀಗ ಗ್ರಾಮದೆಲ್ಲಡೆ ವ್ಯಾಪಿಸಿದ್ದು ಮಕ್ಕಳ ಬಗ್ಗೆ ಹೆಚ್ಚಿನ ಆತಂಕಕ್ಕೀಡಾಗಿರುವ ಗ್ರಾಮಸ್ಥರು ಸಹಾ ಭಯ ಭೀತರಾಗಿದ್ದಾರೆನ್ನಲಾಗಿದೆ.